ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಕೊಡಂಬಿ ರಸ್ತೆಯಲ್ಲಿ ಇಂದು ಮಧ್ಯಾಹ್ನ ಅಪರೂಪದ ವಿದ್ಯಮಾನ ಜರುಗಿದೆ. ಒಂಟಿಸಲಗವೊಂದು ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡ ಬಂದು ನಿಂತಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಬಂದಾಗಿತ್ತು.
ಕಾತೂರು ಅರಣ್ಯ ವಲಯದಿಂದ ಬಂದ ಈ ಗಜರಾಜನು ಪಾಳಾ ಕೊಡಂಬಿ ರಸ್ತೆಯ ನಡುಮಧ್ಯೆ ಬಂದು ನಿಂತು, ಯಾವುದೇ ಆತಂಕವಿಲ್ಲದೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ಗ್ರಾಮೀಣ ಭಾಗಗಳಿಗೆ ತೆರಳಲು ಬಂದ ಸಾರ್ವಜನಿಕರು ಮತ್ತು ವಾಹನ ಸವಾರರು ಆನೆಯನ್ನು ನೋಡಿ ದಂಗಾಗಿ ಹೋಗಿದ್ದರು. ಭಯದಿಂದ ಯಾರೂ ಮುಂದುವರೆಯದೆ ರಸ್ತೆಯಲ್ಲೇ ನಿಂತಿದ್ದ ದೃಶ್ಯ ಕಂಡುಬಂದಿತು.
ಆನೆ ಮಾತ್ರ ಜನ ಅಥವಾ ವಾಹನಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ರಸ್ತೆಯಲ್ಲೇ ನಿಂತು ನೆರೆದಿದ್ದ ಜನರನ್ನು ನೋಡುತ್ತಿತ್ತು. ಈ ಅನಿರೀಕ್ಷಿತ ಅತಿಥಿಯನ್ನು ನೋಡಲು ಜಮಾಯಿಸಿದ್ದ ಜನರು, ಸಮಯ ಕಳೆಯಲು ಮೊಬೈಲ್‌ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡರು. ವಿಡಿಯೋ ಮಾಡುವವರಿಗೆ ಪೋಸ್ ನೀಡುವಂತೆ ನಿಂತಿದ್ದ ಆನೆಯು, ಯಾರಿಗೂ ತೊಂದರೆ ಮಾಡದೆ, ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯವನ್ನು ರಸ್ತೆಯಲ್ಲೇ ಕಳೆಯಿತು.
ನಂತರ, ತನ್ನಷ್ಟಕ್ಕೆ ತಾನೇ ನಿಧಾನವಾಗಿ ಅರಣ್ಯದ ಕಡೆಗೆ ಹೆಜ್ಜೆ ಹಾಕಿತು. ಆನೆಯು ಕಾಡಿನೊಳಗೆ ತೆರಳಿದ ಬಳಿಕವಷ್ಟೇ ಜನರು ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಈ ಕುತೂಹಲಕಾರಿ ಘಟನೆಯನ್ನು ಮೊಟ್ಟೆ ವ್ಯಾಪಾರಿ ಆನಂದ ಮಿರಜಕರ ಅವರು ಪ್ರತ್ಯಕ್ಷದರ್ಶಿಯಾಗಿ ತಿಳಿಸಿದ್ದಾರೆ.

