Friday, December 19, 2025

ಮಾನಸಿಕ ದುರ್ಬಲ ಬಾಲಕಿ ಮೇಲಿನ ದೌರ್ಜನ್ಯಕ್ಕೆ ಕಾಮುಕನಿಗೆ ಸಿಕ್ತು 3 ದಶಕ ಜೈಲು ಶಿಕ್ಷೆ!

ಹೊಸದಿಗಂತ ಬೆಳಗಾವಿ:

ಅಸಹಾಯಕ ಬಾಲಕಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿದ ಕಾಮುಕನಿಗೆ ಬೆಳಗಾವಿಯ ವಿಶೇಷ ಪೋಕ್ಸೋ ನ್ಯಾಯಾಲಯವು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ:

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ವೀರಪ್ಪ ಮುತ್ತಪ್ಪ ದಾನನ್ನವರ (30) ಶಿಕ್ಷೆಗೊಳಗಾದ ಅಪರಾಧಿ. ಈತ 2023ರ ಸೆಪ್ಟೆಂಬರ್ 19ರಂದು ಹುಟ್ಟು ಮೂಕಿ ಹಾಗೂ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಅಪ್ರಾಪ್ತ ಬಾಲಕಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿದ್ದ. ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದ ಸಮಯದಲ್ಲಿ ಒಳನುಗ್ಗಿ, ಬಾಗಿಲು ಹಾಕಿ ಆಕೆಯ ಮೇಲೆ ಬಲಾತ್ಕಾರ ಎಸಗಿದ್ದ.

ಮಾತು ಬಾರದಿದ್ದರೂ ಧೈರ್ಯಗುಂದದ ಬಾಲಕಿ, ತನ್ನ ಮೇಲಾದ ದೌರ್ಜನ್ಯವನ್ನು ಸನ್ನೆ ಮತ್ತು ಹಾವಭಾವಗಳ ಮೂಲಕ ವಿವರಿಸಿದ್ದಳು. ಪ್ರಕರಣದ ಗಂಭೀರತೆ ಅರಿತ ಕುಲಗೋಡ ಎಸ್ಐ ಜಿ.ಎಸ್.ಪಾಟೀಲ ಅವರು ಎಫ್‌ಐಆರ್ ದಾಖಲಿಸಿದ್ದರು. ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, 8 ಸಾಕ್ಷಿಗಳು, 44 ಮಹತ್ವದ ದಾಖಲೆಗಳು ಹಾಗೂ 14 ಮುದ್ದೆಮಾಲುಗಳನ್ನು ಪರಿಶೀಲಿಸಿ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು.

ನ್ಯಾಯಾಲಯವು ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳ ಕಾಲ ಠೇವಣಿ ಇಡಲು ಸೂಚಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ವಾದ ಮಂಡಿಸಿದ್ದರು.

error: Content is protected !!