Wednesday, January 14, 2026
Wednesday, January 14, 2026
spot_img

ಸಂಕಷ್ಟದ ಸಮಯವನ್ನೇ ಬಂಡವಾಳವಾಗಿಸಿಕೊಂಡ ಕಾಮುಕ: ಮಹಿಳೆಗೆ ಲೈಂಗಿಕ ಕಿರುಕುಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗಳ ಪ್ರಾಣ ಉಳಿಸಲು ಪಡೆದ ಸಾಲವೇ ಮಹಿಳೆಯೊಬ್ಬರ ಪಾಲಿಗೆ ಮುಳುವಾದ ಮನಕಲಕುವ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ. ಸಹಾಯ ಮಾಡುವ ನೆಪದಲ್ಲಿ ಹತ್ತಿರವಾದ ಆನ್‌ಲೈನ್ ಸ್ನೇಹಿತನೊಬ್ಬ, ಸಾಲ ತೀರಿಸಲು ಲೈಂಗಿಕವಾಗಿ ಸಹಕರಿಸುವಂತೆ ಮಹಿಳೆಗೆ ಒತ್ತಾಯಿಸಿ ಕಿರುಕುಳ ನೀಡಿದ್ದು, ಇದರಿಂದ ನೊಂದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಘಟನೆಯ ವಿವರ:

ಕೆಲ ದಿನಗಳ ಹಿಂದೆ ಸಂತ್ರಸ್ತೆಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವರ ಮಗಳು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಯ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದ ಮಹಿಳೆಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಪಾರಿತೋಷ್ ಯಾದವ್ ಎಂಬುವವನು 30 ಸಾವಿರ ರೂಪಾಯಿ ಸಾಲ ನೀಡಿದ್ದನು.

ಹಣ ನೀಡಿದ ಬೆನ್ನಲ್ಲೇ ತನ್ನ ಅಸಲಿ ರೂಪ ತೋರಿಸಿದ ಪಾರಿತೋಷ್, ಲೈಂಗಿಕವಾಗಿ ಸಹಕರಿಸುವಂತೆ ಮಹಿಳೆಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ದಿನನಿತ್ಯ ಅಸಭ್ಯ ಸಂದೇಶಗಳು ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದ ಆರೋಪಿ, “ನೀನು ನನ್ನ ಇಚ್ಛೆಗೆ ಒಪ್ಪದಿದ್ದರೆ ನಿನ್ನ ಮೊಬೈಲ್ ಸಂಖ್ಯೆಯನ್ನು ಪೋರ್ನ್ ವೆಬ್‌ಸೈಟ್‌ಗಳಿಗೆ ಹಾಗೂ ವೇಶ್ಯಾವಾಟಿಕೆ ಜಾಲಕ್ಕೆ ನೀಡುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದನು.

ಆರೋಪಿಯ ಕಿರುಕುಳದಿಂದಾಗಿ ದಂಪತಿಗಳ ನಡುವೆ ಜಗಳ ಉಂಟಾಗಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಇದರಿಂದ ತೀವ್ರ ಮನನೊಂದ ಮಹಿಳೆ ಪತಿಯನ್ನು ತೊರೆದು ಸ್ನೇಹಿತೆಯ ಮನೆಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಸ್ನೇಹಿತೆಯ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸದ್ಯ ಸಂತ್ರಸ್ತೆ ನೀಡಿದ ದೂರಿನನ್ವಯ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪಾರಿತೋಷ್ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Most Read

error: Content is protected !!