April 4, 2026
Saturday, April 4, 2026
spot_img

ರಾಯಚೂರು ಆಗಸದಲ್ಲಿ ಲೋಹದ ಹಕ್ಕಿ: ಅಪರೂಪದ ಖನಿಜಗಳ ಪತ್ತೆಗೆ ಹೈಟೆಕ್ ‘ಹೆಲಿಬೋನ್’ ಸಮೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಚೂರು ಜಿಲ್ಲೆಯ ಮಣ್ಣಿನಲ್ಲಿ ಅಡಗಿರುವ ಅಪರೂಪದ ನೈಸರ್ಗಿಕ ಸಂಪತ್ತನ್ನು ಹೊರತೆಗೆಯಲು ಕೇಂದ್ರ ಭೂ ಭೌತಶಾಸ್ತ್ರ ಇಲಾಖೆ ಈಗ ಹೈಟೆಕ್ ಕಾರ್ಯಾಚರಣೆಗೆ ಇಳಿದಿದೆ. ನಗರದ ಹೊರವಲಯದ ಮಲಿಯಾಬಾದ್ ಅರಣ್ಯ ಪ್ರದೇಶ ಸೇರಿದಂತೆ ವಿವಿಧೆಡೆ ಹೆಲಿಕಾಪ್ಟರ್ ಮೂಲಕ ವಿಶೇಷ ‘ಹೆಲಿಬೋನ್’ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.

ಈ ಬೃಹತ್ ಕಾರ್ಯಾಚರಣೆಯ ಮುಖ್ಯ ಉದ್ದೇಶ ಭೂಮಿಯ ಆಳದಲ್ಲಿ ಅಡಗಿರುವ ಪ್ಲಾಟಿನಂ, ಚಿನ್ನ, ಮಾಲಿಬ್ಡಿನಮ್ ಮತ್ತು ಯುರೇನಿಯಂನಂತಹ ಅತ್ಯಮೂಲ್ಯ ಖನಿಜಗಳ ನಿಕ್ಷೇಪಗಳನ್ನು ಗುರುತಿಸುವುದು. ಫೆಬ್ರವರಿ 10ರಿಂದ ಪ್ರಾರಂಭವಾಗಿರುವ ಈ ಶೋಧ ಕಾರ್ಯವು ಏಪ್ರಿಲ್ 30ರವರೆಗೆ ಮುಂದುವರಿಯಲಿದೆ. ಬೆಂಗಳೂರಿನ ಭೂಗರ್ಭ ಸಮೀಕ್ಷಾ ಇಲಾಖೆಯ ಉನ್ನತ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ಖಾಸಗಿ ಏಜೆನ್ಸಿಗಳ ಸಹಯೋಗದೊಂದಿಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗಗಳಲ್ಲಿ ಈ ಸರ್ವೆ ನಡೆಯುತ್ತಿದೆ.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಡೆಯುವ ಈ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್‌ಗೆ ಡ್ರೋನ್ ಮಾದರಿಯ ‘ಟೈಮ್ ಡೊಮೇನ್ ಎಲೆಕ್ಟ್ರೋಮ್ಯಾಗ್ನೆಟಿಕ್’ ಯಂತ್ರವನ್ನು ಅಳವಡಿಸಲಾಗಿದೆ. ಭೂಮಿಯಿಂದ ಸುಮಾರು 200 ರಿಂದ 1000 ಅಡಿ ಎತ್ತರದಲ್ಲಿ, ಗಂಟೆಗೆ 40 ರಿಂದ 50 ನಾಟ್ ಮೈಲಿ ವೇಗದಲ್ಲಿ ಹಾರಾಡುವ ಹೆಲಿಕಾಪ್ಟರ್, ತರಂಗಗಳ ಮೂಲಕ ಭೂಮಿಯ ಆಳದಲ್ಲಿರುವ ಖನಿಜಗಳ ಮಾಹಿತಿಯನ್ನು ಕಲೆಹಾಕುತ್ತಿದೆ.

ಕಡಿಮೆ ಎತ್ತರದಲ್ಲಿ ವಿಚಿತ್ರ ಯಂತ್ರದೊಂದಿಗೆ ಹಾರಾಡುತ್ತಿರುವ ಹೆಲಿಕಾಪ್ಟರ್ ಅನ್ನು ಕಂಡು ಸ್ಥಳೀಯರಲ್ಲಿ ಒಂದೆಡೆ ಅತೀವ ಕುತೂಹಲ ಮೂಡಿದ್ದರೆ, ಮತ್ತೊಂದೆಡೆ ಅನಿರೀಕ್ಷಿತ ಹಾರಾಟದಿಂದಾಗಿ ಸಣ್ಣ ಪ್ರಮಾಣದ ಆತಂಕವೂ ಮನೆಮಾಡಿದೆ. ಒಟ್ಟಾರೆಯಾಗಿ, ಈ ಸಮೀಕ್ಷೆಯ ವರದಿ ರಾಯಚೂರಿನ ಭವಿಷ್ಯದ ಕೈಗಾರಿಕಾ ಮತ್ತು ಆರ್ಥಿಕ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !