ಹೊಸದಿಗಂತ ವರದಿ, ಕಲಬುರಗಿ:
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ೨೦೨೬-೨೭ನೇ ಸಾಲಿನ ಬಜೆಟ್ ಸಂಪೂರ್ಣವಾಗಿ ನಿರಾಶಾದಾಯಕ ಬಜೆಟ್, ದೂರದೃಷ್ಟಿ ಹೊಂದಲಾರದ ಹಾಗೂ ಬರೀ ಹೇಳಿಕೆಗೆ ಮಾತ್ರ ಸಿಮೀತವಾದ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಈ ಬಜೆಟ್ ಕೇವಲ ಘೋಷಣೆಗಳಿಗೆ ಸೀಮಿತವಾಗಿದ್ದು,ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯ ಎಸಗಲಾಗಿದೆ.ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಸರಕಾರ ಈ ಬಾರಿಯೂ ಬರೀ ಚಂಬು ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ವರ್ಷಕ್ಕಿಂತ ಬಜೆಟ್ ಗಾತ್ರ ಶೇ. 5.56ರಷ್ಟು ಹೆಚ್ಚಾಗಿದ್ದರೂ (₹53.47 ಲಕ್ಷ ಕೋಟಿ), ಕರ್ನಾಟಕದ ಪಾಲಿಗೆ ದಕ್ಕಿದ್ದು ಶೂನ್ಯ.ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಶೇ. 5.56ರಷ್ಟು ಹೆಚ್ಚಾಗಿದ್ದರೂ ಕರ್ನಾಟಕಕ್ಕೆ ನಯಾಪೈಸೆ ಲಾಭವಾಗಿಲ್ಲ. ಹೈಸ್ಪೀಡ್ ರೈಲು ಘೋಷಣೆ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಕ್ಕೆ ಸೀಮಿತವಾಗಿದೆ. ನಾವು ಕೇಳಿದ್ದು ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು ಮಾರ್ಗಗಳನ್ನು. ಇದರಿಂದ ರಾಜ್ಯದ ಜನರಿಗೆ ಯಾವುದೇ ಅನುಕೂಲವಿಲ್ಲ. ಕೇವಲ ವಿಕಾಸಿತ ಭಾರತ ಎಂಬ ಮಾತುಗಳು ಬಿಟ್ಟರೆ ಏನೂ ಇಲ್ಲ ಎಂದು ಟೀಕಿಸಿದರು.
ಕರ್ನಾಟಕವು ಪ್ರತಿವರ್ಷ ಕೇಂದ್ರಕ್ಕೆ 4.5 ಲಕ್ಷ ಕೋಟಿಯಿಂದ 5.5 ಲಕ್ಷ ಕೋಟಿವರೆಗೆ ತೆರಿಗೆ ಪಾವತಿಸುತ್ತದೆ.ಆದರೆ,ನಮಗೆ ವಾಪಸ್ ಬರುವುದು ಕೇವಲ ₹
14 ಮಾತ್ರ. 2024-25, 2025-26ನೇ ಸಾಲಿನಲ್ಲಿ ತೆರಿಗೆ ವಾಪಾಸ್ ನಲ್ಲಿ ಬಿಹಾರಕ್ಕೆ 9.981 ಕೋಟಿ ರು.,ಉತ್ತರ ಪ್ರದೇಶಕ್ಕೆ 17.679 ಕೋಟಿ ರು. ನೀಡುವ ಕೇಂದ್ರ, ಕರ್ನಾಟಕಕ್ಕೆ ಮಾತ್ರ 4.131 ಕೋಟಿ ರು. ನೀಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೂ ಅನ್ಯಾಯ ಮಾಡಿದೆ ಎಂದರು.
ಸಚಿವ ಡಾ. ಶರಣಾಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ,ಎನ್. ಎಸ್. ಭೋಸರಾಜು, ಶಾಸಕರಾದ ಎಂ.ವೈ ಪಾಟೀಲ್, ಖನೀಜ್ ಫಾತಿಮಾ, ವಿ.ಪ ಸದಸ್ಯ ಜಗದೇವ್ ಗುತ್ತೇದಾರ, ಮೇಯರ್ ವರ್ಷಾ ಜಾನೆ, ಡಿಸಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿ.ಪಂ ಸಿಇಓ ಭಂವರ ಸಿಂಗ್ ಮೀನಾ, ಜೆಸ್ಕಾಂ ಎಂ.ಡಿ ಕೃಷ್ಣ ಭಾಜಪೇಯಿ, ಉಪ ಆಯುಕ್ತೆ ಸಾಹಿತ್ಯ ಆಲದಕಟ್ಟೆ ಸೇರಿ ಅನೇಕರು ಇದ್ದರು.



