ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊಟ್ಟಮೊದಲ ‘ವಂದೇ ಭಾರತ್ ಸ್ಲೀಪರ್’ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದರು. ಕೇವಲ ಚಾಲನೆ ನೀಡುವುದಕ್ಕಷ್ಟೇ ಸೀಮಿತವಾಗದೆ ರೈಲಿನೊಳಗೆ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಪ್ರಯಾಣದ ಅವಧಿಯಲ್ಲಿ ಪ್ರಧಾನಿಯವರು ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತು ಅವರ ಭವಿಷ್ಯದ ಕನಸುಗಳ ಬಗ್ಗೆ ಚರ್ಚಿಸಿದರು. ಅಲ್ಲದೆ, ರೈಲನ್ನು ಮುನ್ನಡೆಸುವ ಲೋಕೋ ಪೈಲಟ್‌ಗಳು ಮತ್ತು ಹಗಲಿರುಳು ಶ್ರಮಿಸಿದ ರೈಲ್ವೆ ತಾಂತ್ರಿಕ ಸಿಬ್ಬಂದಿಯೊಂದಿಗೆ ಮುಖಾಮುಖಿಯಾಗಿ ಮಾತನಾಡಿದರು.

ಈ ಬೃಹತ್ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಗುಣಮಟ್ಟದಿಂದ ಸಾಕಾರಗೊಳಿಸಲು ಶ್ರಮಿಸಿದ ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯವೈಖರಿಯನ್ನು ಪ್ರಧಾನಿಯವರು ಮುಕ್ತಕಂಠದಿಂದ ಶ್ಲಾಘಿಸಿದರು. “ಇದು ಕೇವಲ ತಾಂತ್ರಿಕ ಯಶಸ್ಸಲ್ಲ, ದೇಶದ ಶ್ರಮಜೀವಿಗಳ ಬೆವರಿನ ಪ್ರತಿಫಲ” ಎಂದು ಅವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.


