April 10, 2026
Friday, April 10, 2026
spot_img

ಜವಳಿ ರಫ್ತಿನಲ್ಲಿ ಹೊಸ ಯುಗ: ಅಮೆರಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳಿಗೆ ‘ಜೀರೋ ಡ್ಯೂಟಿ’ ಫೀಸ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಭಾರತಕ್ಕೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶಕ್ಕೆ ದೊರೆಯುತ್ತಿರುವಂತೆ ಭಾರತದ ಜವಳಿ ಉತ್ಪನ್ನಗಳಿಗೂ ಶೂನ್ಯ ಸುಂಕದ ಪ್ರಯೋಜನ ಸಿಗಲಿದೆ ಎಂಬ ಮಹತ್ವದ ಸುಳಿವನ್ನು ಅವರು ನೀಡಿದ್ದಾರೆ.

ಪ್ರಸ್ತುತ ಬಾಂಗ್ಲಾದೇಶದ ಜವಳಿ ಉತ್ಪನ್ನಗಳ ಮೇಲೆ ಅಮೆರಿಕದಲ್ಲಿ ಒಟ್ಟು ಶೇ. 31ರಷ್ಟು ಸುಂಕವಿದೆ. ಒಂದು ವೇಳೆ ಬಾಂಗ್ಲಾದೇಶವು ಅಮೆರಿಕದ ನೂಲು ಬಳಸಿದರೆ ಈ ಸುಂಕ ಶೇ. 12ಕ್ಕೆ ಇಳಿಕೆಯಾಗುತ್ತದೆ. ಇದೇ ರೀತಿಯ ಸೌಲಭ್ಯ ಭಾರತಕ್ಕೂ ಅನ್ವಯವಾಗಲಿದೆ.

ಭಾರತೀಯ ಕಂಪನಿಗಳು ಅಮೆರಿಕದಿಂದ ಹತ್ತಿ ಅಥವಾ ನೂಲನ್ನು ಆಮದು ಮಾಡಿಕೊಂಡು, ಅದರಿಂದ ಸಿದ್ಧಪಡಿಸಿದ ಜವಳಿ ಉತ್ಪನ್ನಗಳನ್ನು ಮರಳಿ ಅಮೆರಿಕಕ್ಕೆ ರಫ್ತು ಮಾಡಿದರೆ, ಅಲ್ಲಿ ಯಾವುದೇ ಸುಂಕ ಪಾವತಿಸಬೇಕಿಲ್ಲ.

“ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕಿಂತ ಬಾಂಗ್ಲಾದೇಶಕ್ಕೇ ಹೆಚ್ಚಿನ ಲಾಭವಾಗಿದೆ” ಎಂಬ ರಾಹುಲ್ ಗಾಂಧಿ ಅವರ ಟೀಕೆಗಳನ್ನು ಗೋಯಲ್ ತಳ್ಳಿಹಾಕಿದ್ದಾರೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಸುಳ್ಳು ಹರಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದಿಂದ ಹತ್ತಿ ಆಮದು ಮಾಡಿಕೊಳ್ಳುವುದರಿಂದ ದೇಶದ ಹತ್ತಿ ಬೆಳೆಗಾರರಿಗೆ ಯಾವುದೇ ತೊಂದರೆಯಾಗದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಭಾರತ-ಅಮೆರಿಕ ಜಂಟಿ ಹೇಳಿಕೆ ಅಥವಾ ಶ್ವೇತಭವನದ ಅಧಿಕೃತ ಫ್ಯಾಕ್ಟ್‌ಶೀಟ್‌ನಲ್ಲಿ ಈ ಸುಂಕ ವಿನಾಯಿತಿಯ ಬಗ್ಗೆ ನೇರವಾದ ಉಲ್ಲೇಖವಿಲ್ಲದಿದ್ದರೂ, ಅಂತಿಮ ಒಪ್ಪಂದದಲ್ಲಿ ಈ ಅಂಶಗಳು ಭಾರತದ ಪರವಾಗಿರಲಿವೆ ಎಂಬುದು ಸಚಿವರ ಭರವಸೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !