ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಕುಂಭಮೇಳ ಖ್ಯಾತಿಯ ಮೊನಲಿಸಾ ಪ್ರಕರಣ ಇದೀಗ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ. ಕೇರಳದಲ್ಲಿ ಫರ್ಮನ್ ಖಾನ್ ಜೊತೆ ನಡೆದ ಮದುವೆ ಈಗ ಕಾನೂನು ಗೊಂದಲಕ್ಕೆ ಸಿಲುಕಿದ್ದು, ಮೊನಲಿಸಾ ನಾಪತ್ತೆಯಾಗಿರುವ ಆರೋಪ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ.
ಇತ್ತೀಚೆಗೆ ಪ್ರೇಮ ವಿವಾಹ ಮಾಡಿಕೊಂಡಿದ್ದ ಈ ಜೋಡಿ, ತಮ್ಮ ಸಂಬಂಧದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿತ್ತು. ಆದರೆ ತನಿಖೆ ವೇಳೆ ಅಧಿಕೃತ ದಾಖಲೆಗಳ ಆಧಾರದ ಮೇಲೆ ಮೊನಲಿಸಾ ಅಪ್ರಾಪ್ತೆ ಎಂಬುದು ಬಹಿರಂಗವಾಗಿದೆ. ಆಸ್ಪತ್ರೆ ಹಾಗೂ ಸ್ಥಳೀಯ ದಾಖಲೆಗಳ ಪ್ರಕಾರ ಮದುವೆ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ 2 ತಿಂಗಳು ವಯಸ್ಸು ಇದ್ದುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ್ ಠಾಣೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ:
ಇದೀಗ ಫರ್ಮನ್ ಖಾನ್, ಮೊನಲಿಸಾ ಕಾಣೆಯಾಗಿದ್ದು ಆಕೆಯನ್ನು ಕುಟುಂಬಸ್ಥರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಮೊನಲಿಸಾ ತಾಯಿ, “ಇದು ಕೇವಲ ಡ್ರಾಮಾ, ನನ್ನ ಮಗಳನ್ನು ದಾರಿ ತಪ್ಪಿಸಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಷ್ಟ್ರೀಯ ಪಂಗಡ ಆಯೋಗವೂ ಗಮನ ಹರಿಸಿದ್ದು, ಬಹುರಾಜ್ಯ ಮಟ್ಟದಲ್ಲಿ ತನಿಖೆ ತೀವ್ರಗೊಂಡಿದೆ.



