March 22, 2026
Sunday, March 22, 2026
spot_img

ಮನೆಯೇ ಸೆರೆಮನೆಯಾದಾಗ ಕಂಡ ಹೊಸ ಪ್ರಪಂಚ: 2020ರ ಆ ಕರಾಳ ದಿಗ್ಬಂಧನಕ್ಕೆ ಈಗ 6 ವರುಷಗಳ ನೆನಪು

ಸರಿಯಾಗಿ ಆರು ವರ್ಷಗಳ ಹಿಂದೆ, ಅಂದರೆ 2020ರ ಮಾರ್ಚ್ 24ರಂದು ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾಯಿತು. ಕಿಕ್ಕಿರಿದು ತುಂಬಿರುತ್ತಿದ್ದ ರಸ್ತೆಗಳು ಇದ್ದಕ್ಕಿದ್ದಂತೆ ಸ್ಮಶಾನ ಮೌನಕ್ಕೆ ಶರಣಾದವು. ರೈಲುಗಳು ಹಳಿ ಬಿಡಲಿಲ್ಲ, ವಿಮಾನಗಳು ರೆಕ್ಕೆ ಬಿಚ್ಚಲಿಲ್ಲ. ನಮ್ಮ ಬದುಕಿನ ಚಕ್ರಕ್ಕೆ ‘ಕೊರೊನಾ’ ಎಂಬ ಪುಟ್ಟ ವೈರಸ್ ದೊಡ್ಡ ಬ್ರೇಕ್ ಹಾಕಿತ್ತು. ಆದರೆ ಆ ಮೌನದ ಹಿಂದೆ ಅಡಗಿದ್ದು ಕೇವಲ ಶಾಂತಿಯಲ್ಲ, ಬದಲಾಗಿ ಭೀಕರವಾದ ಸಾವು ಮತ್ತು ನೋವಿನ ಕಿರುಚಾಟಗಳು.

‘ಜನತಾ ಕರ್ಫ್ಯೂ’ ಮುಗಿಯುತ್ತಿದ್ದಂತೆ ಇಡೀ ದೇಶಕ್ಕೆ ಲಾಕ್‌ಡೌನ್ ಘೋಷಣೆಯಾದಾಗ ಆರಂಭದಲ್ಲಿ ಅದು ರಜೆ ಎಂದು ಹಲವರು ಖುಷಿಪಟ್ಟರು. ಲಾಕ್‌ಡೌನ್ ಎಂದರೆ ಕೇವಲ ಮನೆಯೊಳಗೆ ಇರುವುದಾಗಿರಲಿಲ್ಲ. ಅಂದು ಕೇಳಿಸುತ್ತಿದ್ದ ಆಂಬ್ಯುಲೆನ್ಸ್ ಸೈರನ್‌ಗಳು ಸಾವಿನ ಮುನ್ಸೂಚನೆಯಂತೆ ಭಾಸವಾಗುತ್ತಿದ್ದವು. ಆಸ್ಪತ್ರೆಯಲ್ಲಿ ಬೆಡ್‌ಗಳಿಲ್ಲದೆ, ಆಮ್ಲಜನಕ ಸಿಗದೆ ಉಸಿರು ಚೆಲ್ಲಿದ ಸಾವಿರಾರು ಜೀವಗಳು ನಮ್ಮ ಕಣ್ಣಮುಂದಿವೆ. ಮನೆಯಲ್ಲೇ ಕುಳಿತಿದ್ದರೂ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಸಾವಿನ ಸಂಖ್ಯೆಗಳು ಪ್ರತಿಯೊಬ್ಬರಲ್ಲೂ ಆತಂಕದ ಉತ್ತುಂಗವನ್ನು ಮುಟ್ಟಿಸಿದ್ದವು.

ಕಚೇರಿಗಳೆಲ್ಲವೂ ಬೆಡ್‌ರೂಮ್‌ಗೆ ಸ್ಥಳಾಂತರಗೊಂಡವು. ಝೂಮ್ ಮೀಟಿಂಗ್‌ಗಳು ಜೀವನದ ಭಾಗವಾದವು. ವೃತ್ತಿಜೀವನದ ಧಾವಂತದಲ್ಲಿ ಕುಟುಂಬಕ್ಕೆ ಸಮಯ ಕೊಡಲಾಗದವರು ಅನಿವಾರ್ಯವಾಗಿಯಾದರೂ ಮನೆಯವರ ಜೊತೆ ಕಾಲ ಕಳೆದರು. ಲೂಡೋ, ಕ್ಯಾರಂ ಆಟಗಳು ಮತ್ತೆ ಚಾಲ್ತಿಗೆ ಬಂದವು. ಯೂಟ್ಯೂಬ್ ನೋಡಿ ಅಡುಗೆ ಮಾಡುವುದು, ಗಿಡಗಳನ್ನು ಬೆಳೆಸುವುದು ಎಲ್ಲರ ಹವ್ಯಾಸವಾಯಿತು.

ಕೋವಿಡ್ ಲಾಕ್‌ಡೌನ್ ನಮಗೆ ನೀಡಿದ ಅತಿದೊಡ್ಡ ನೋವೆಂದರೆ, ಸತ್ತವರ ಮುಖವನ್ನು ಕೊನೆಯ ಬಾರಿ ನೋಡಲು ಸಾಧ್ಯವಾಗದಿರುವುದು. ಪ್ರೀತಿಯ ತಂದೆ, ತಾಯಿ ಅಥವಾ ಸ್ನೇಹಿತರನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ದೂರದಿಂದಲೇ ಅಂತ್ಯಕ್ರಿಯೆ ಮಾಡುವುದನ್ನು ನೋಡುವುದು ದೈಹಿಕ ನೋವಿಗಿಂತ ಮಾನಸಿಕವಾಗಿ ಜನರನ್ನು ಕುಗ್ಗಿಸಿತ್ತು. ಸಾವು ಅಷ್ಟು ಅನಾಥವಾಗಿ ಬಂದೊದಗಬಹುದು ಎಂದು ಯಾರೂ ಊಹಿಸಿರಲಿಲ್ಲ.

ಒಂದೆಡೆ ವೈರಸ್ ಕೊಲ್ಲುತ್ತಿದ್ದರೆ, ಇನ್ನೊಂದೆಡೆ ಹಸಿವು ಜೀವ ಹಿಂಡುತ್ತಿತ್ತು. ನೂರಾರು ಕಿಲೋಮೀಟರ್ ದೂರದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಹೊರಟ ವಲಸೆ ಕಾರ್ಮಿಕರ ಸ್ಥಿತಿ ಅಯೋಮಯವಾಗಿತ್ತು. ನಗರದ ಸ್ಮಶಾನಗಳ ಮುಂದೆ ಹೆಣ ಹೊತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಗಲಿರುಳು ಚಿತೆಗಳು ಉರಿಯುತ್ತಿದ್ದವು. ಸಾವಿನ ಅಟ್ಟಹಾಸ ಅದೆಷ್ಟಿತ್ತೆಂದರೆ, ಮಣ್ಣು ಮಾಡಲು ಜಾಗವಿಲ್ಲದೆ ಹರಿಯುವ ನದಿಗಳಲ್ಲಿ ಹೆಣಗಳು ತೇಲಿ ಬಂದ ದೃಶ್ಯಗಳು ಜಗತ್ತನ್ನೇ ಬೆಚ್ಚಿಬೀಳಿಸಿದ್ದವು.

ಮಾನವ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಪ್ರಕೃತಿ ನಿರಾಳವಾಗಿ ಉಸಿರಾಡಿತು. ಕಲುಷಿತವಾಗಿದ್ದ ನದಿಗಳು ತಿಳಿಯಾದವು, ವಾಯುಮಾಲಿನ್ಯ ಕಡಿಮೆಯಾಗಿ ದೂರದ ಪರ್ವತಗಳು ಸ್ಪಷ್ಟವಾಗಿ ಕಾಣಿಸತೊಡಗಿದವು. ಪ್ರಕೃತಿ ನಮಗೆ ಕೊಟ್ಟ ದೊಡ್ಡ ಎಚ್ಚರಿಕೆ ಇದಾಗಿತ್ತು.

ಇಂದು ನಾವು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದೇವೆ, ಜೀವನ ಸಹಜ ಸ್ಥಿತಿಗೆ ಬಂದಿದೆ. ಆದರೆ ಆ ಆರು ವರ್ಷಗಳ ಹಿಂದಿನ ನೋವು, ಆಸ್ಪತ್ರೆಯ ಹೊರಗೆ ಆಮ್ಲಜನಕಕ್ಕಾಗಿ ಅಂಗಲಾಚಿದ ಆ ಕಣ್ಣುಗಳು ನಮಗೆ ದೊಡ್ಡ ಪಾಠವನ್ನು ಕಲಿಸಿವೆ. ಆರೋಗ್ಯದ ಮಹತ್ವ ಮತ್ತು ಪ್ರೀತಿಪಾತ್ರರ ಬೆಲೆ ಏನು ಎಂಬುದು ಆ ಕರಾಳ ದಿನಗಳು ನಮಗೆ ಮನವರಿಕೆ ಮಾಡಿಸಿದ ಕಹಿ ಸತ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !