ಹೊಸದಿಗಂತ ವರದಿ, ಅಂಕೋಲಾ:
ಅಂಕೋಲಾ ತಾಲೂಕಿನ ಅಡ್ಲೂರು ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇತ್ತೀಚೆಗೆ ಡಾಂಬರ್ ತುಂಬಿದ ಟ್ಯಾಂಕರ್ ಉರುಳಿದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹರಿದು ತುಂಬಿಕೊಂಡಿರುವ ಡಾಂಬರ್ ದ್ರಾವಣ ಮನುಷ್ಯರು ಸೇರಿದಂತೆ ಜೀವಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಭಾರೀ ಗಾತ್ರದ ಹೆಬ್ಬಾವೊಂದು ರಸ್ತೆಯಲ್ಲಿ ಚೆಲ್ಲಿರುವ ಡಾಂಬರಿನಲ್ಲಿ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.
ಕಾರವಾರದಿಂದ ರಾಜಸ್ತಾನಕ್ಕೆ ತೆರಳುತ್ತಿದ್ದ ಡಾಂಬರ್ ತುಂಬಿದ ಟ್ಯಾಂಕರ್ ರಸ್ತೆಯ ದುಸ್ತಿತಿಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಅಪಾರ ಪ್ರಮಾಣದಲ್ಲಿ ಡಾಂಬರು ರಸ್ತೆಯ ಪಕ್ಕ ಸುರಿದುಕೊಂಡಿದ್ದು ವಾಹನಗಳಾಗಲಿ, ಜೀವಿಗಳಾಗಲಿ ಅದರಲ್ಲಿ ಸಿಲುಕಿದರೆ ಹೊರ ಬರುವುದು ಕಷ್ಟಕರ ಎನ್ನುವಂತಿದೆ.
ಅರಣ್ಯ ಪ್ರದೇಶದ ಪಕ್ಕದಲ್ಲೇ ಹಾದು ಹೋಗಿರುವ ರಸ್ತೆ ಇದಾಗಿರುವುದರಿಂದ ರಸ್ತೆಯ ಪಕ್ಕದಲ್ಲಿ ಬಂದಿದ್ದ ಹೆಬ್ಬಾವು ಡಾಂಬರಿನಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಟ ನಡೆಸುತ್ತಿರುವುದನ್ಧು ಗಮನಿಸಿದ ಸ್ಥಳೀಯರು ಉರಗ ಸಂರಕ್ಷಕ ಮಹೇಶ ನಾಯ್ಕ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ಧು ತಮ್ಮ ಮಗ ಗಗನ್ ಜೊತೆ ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಅವರು ಪ್ರಯಾಸಪಟ್ಟು ಹೆಬ್ಬಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬ್ಬಾವಿಗೆ ಅಂಕೋಲಾ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಅಭಿಷೇಕ ಎ.ಟಿ, ಸಹಾಯಕ ಪಶು ವೈದ್ಯಪ್ರಶಾಂತ್ ಚಿಕಿತ್ಸೆ ನೀಡಿದರು.
ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ ಮತ್ತು ಚಂದ್ರಶೇಖರ ಸಹಕರಿಸಿದರು.
ರಸ್ತೆಯಲ್ಲಿದ್ದ ಡಾಂಬರಿನಲ್ಲಿ ಸಿಲುಕಿ ಒದ್ದಾಡಿದ ಹೆಬ್ಬಾವು: ಉರಗ ಸಂರಕ್ಷಕರಿಂದ ರಕ್ಷಣೆ
