ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಹೇಳಿಕೆಯನ್ನು ಆಧರಿಸಿ ಎದ್ದಿರುವ ‘ಕೋಮುವಾದ’ ವಿವಾದದ ನಡುವೆಯೇ, ಅವರ ಪುತ್ರಿಯರಾದ ಖತೀಜಾ ಮತ್ತು ರಹೀಮಾ ತಂದೆಯ ಬೆಂಬಲಕ್ಕೆ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಟೀಕೆಗಳು ಮಿತಿಮೀರಿವೆ ಎಂದು ಪುತ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲಯಾಳಂ ಸಂಗೀತ ನಿರ್ದೇಶಕ ಕೈಲಾಶ್ ಮೆನನ್ ಅವರು ರೆಹಮಾನ್ ಪರವಾಗಿ ಬರೆದಿದ್ದ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪುತ್ರಿಯರು, ತಮ್ಮ ತಂದೆಯ ವಿರುದ್ಧ ನಡೆಯುತ್ತಿರುವುದು ತೇಜೋವಧೆಯೇ ಎಂದು ಪ್ರಶ್ನಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂಬುದನ್ನು ನೆನಪಿಸುತ್ತಾ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೈಲಾಶ್ ಮೆನನ್ ತಮ್ಮ ಪೋಸ್ಟ್‌ನಲ್ಲಿ, ಅಭಿಪ್ರಾಯ ಭಿನ್ನತೆಗಳು ಸಹಜವಾದವು ಎಂದೂ, ಟೀಕೆಗಳು ಇರಬಹುದು ಆದರೆ ಅವು ದ್ವೇಷ ಅಥವಾ ವೈಯಕ್ತಿಕ ದಾಳಿಯಾಗಿ ಮಾರ್ಪಡಬಾರದು ಎಂದು ಹೇಳಿದ್ದಾರೆ. ಈ ಮಾತುಗಳನ್ನು ಹಂಚಿಕೊಳ್ಳುವ ಮೂಲಕ ರೆಹಮಾನ್ ಪುತ್ರಿಯರು ತಮ್ಮ ತಂದೆಯ ನಿಲುವನ್ನು ಸಮರ್ಥಿಸಿದ್ದಾರೆ.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಎ.ಆರ್.ರೆಹಮಾನ್ ಕೂಡ ಸ್ಪಷ್ಟನೆ ನೀಡಿದ್ದರು. ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂದು ಹೇಳಿದ ಅವರು, ಭಾರತವೇ ತನ್ನ ಪ್ರೇರಣೆ ಮತ್ತು ತವರು ದೇಶ ಎಂದು ಒತ್ತಿ ಹೇಳಿದರು. ಭಾರತೀಯನಾಗಿ ಹುಟ್ಟಿರುವುದಕ್ಕೆ ತಾನು ಹೆಮ್ಮೆಪಡುತ್ತೇನೆ ಎಂದೂ ತಿಳಿಸಿದ್ದಾರೆ.


