ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ಶಾಲೆಯಿಂದ ಮನೆಗೆ ಮರಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹುಚ್ಚುನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ.
ಗ್ರಾಮದ ಸರ್ಕಾರಿ ಶಾಲೆಯಿಂದ ಪಾಠ ಮುಗಿಸಿಕೊಂಡು ಮಕ್ಕಳು ಸಂಜೆ ಮನೆಗೆ ಮರಳುತ್ತಿದ್ದಾಗ, ಏಕಾಏಕಿ ನಾಯಿಗಳ ಹಿಂಡು ದಾಳಿ ಮಾಡಿದೆ. ನಾಯಿಗಳ ಅಟ್ಟಹಾಸಕ್ಕೆ ಸಿಲುಕಿದ ಮಕ್ಕಳ ಕೈ, ಕಾಲು ಹಾಗೂ ಮುಖದ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ. ಮಕ್ಕಳ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದು ನಾಯಿಗಳನ್ನು ಓಡಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಗಾಯಗೊಂಡ ನಾಲ್ವರು ಮಕ್ಕಳನ್ನು ತಕ್ಷಣವೇ ಸಮೀಪದ ಅಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.



