ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕೊಂಡಿಥರ್ ಗ್ರಾಮದ ಬಳಿಯ ತಮ್ಹಿನಿ ಘಾಟ್‌ನಲ್ಲಿ ಬಂಡೆಯೊಂದು ಕಾರಿನ ಮೇಲೆ ಬಿದ್ದು 43 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಪುಣೆ ನಿವಾಸಿ ಸ್ನೇಹಲ್ ತನ್ನ ಪತಿ ಮತ್ತು ಮಗನೊಂದಿಗೆ ಪುಣೆಯಿಂದ ಮಂಗಾವ್‌ಗೆ ಪ್ರಯಾಣಿಸುತ್ತಿದ್ದರು. ಸ್ನೇಹಲ್ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಾಗ ಘಾಟ್ ನಲ್ಲಿ ಕಾರಿನ ಮೇಲೆ ದೊಡ್ಡ ಬಂಡೆ ಬಿದ್ದು, ಸನ್‌ರೂಫ್ ಮುರಿದು ಅವರ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ನಡೆದ ಸಮಯದಲ್ಲಿ ಮಳೆ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ನೇಹಲ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ತಮ್ಹಿನಿ ಘಾಟ್ ತನ್ನ ಸುಂದರ ನೋಟಗಳಿಗೆ ಹೆಸರುವಾಸಿಯಾಗಿದೆ, ಆದರೆ ಮಳೆಗಾಲದಲ್ಲಿ ಈ ಪ್ರದೇಶವು ಹೆಚ್ಚಾಗಿ ಭೂಕುಸಿತಗಳು ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಹಿಂದೆ ಹಲವಾರು ಅಪಘಾತಗಳು ಸಂಭವಿಸಿವೆ. ಸನ್‌ರೂಫ್ ತೆರೆದಿಟ್ಟು ವಾಹನ ಚಲಾಯಿಸುವುದು ಅತ್ಯಂತ ಅಪಾಯಕಾರಿ ಎಂದು ಪೊಲೀಸರು ಈ ಹಿಂದೆ ಎಚ್ಚರಿಸಿದ್ದರು.

