ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ನಾಗರಭಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ, ನರ್ಸ್‌ಗಳು ಬಟ್ಟೆ ಬದಲಿಸುವ ದೃಶ್ಯವನ್ನು ಮೊಬೈಲ್‌ನಲ್ಲಿ ಗುಪ್ತವಾಗಿ ಚಿತ್ರೀಕರಿಸುತ್ತಿದ್ದುದನ್ನು ಪತ್ತೆಹಚ್ಚಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಬಂಧಿತ ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷದಿಂದ ನಾಗರಭಾವಿಯ ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಸಹಾಯಕಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ನರ್ಸ್ ಒಬ್ಬರು ಬಟ್ಟೆ ಬದಲಿಸುತ್ತಿದ್ದಾಗ, ಈತ ರಹಸ್ಯವಾಗಿ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ಆಸ್ಪತ್ರೆಯ ಹಿರಿಯ ವೈದ್ಯ ಡಾ. ಚೇತನ್ ಅವರು ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಸೀಜ್ ಮಾಡಲಾಗಿದ್ದು, ಅದನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಆರೋಪಿ ಸುವೆಂದು ಮೊಹಂತ ಕೇವಲ ಒಬ್ಬರ ವಿಡಿಯೋ ಮಾಡಿದ್ದಾನೋ ಅಥವಾ ಈ ಹಿಂದೆ ಬೇರೆ ನರ್ಸ್‌ಗಳ ಖಾಸಗಿ ದೃಶ್ಯಗಳನ್ನೂ ಚಿತ್ರೀಕರಿಸಿದ್ದಾನೋ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನಾ ಅಥವಾ ಯಾರಿಗಾದರೂ ಕಳುಹಿಸಿದ್ದಾನಾ ಎಂಬ ಕೋನದಲ್ಲೂ ತನಿಖೆ ಚುರುಕುಗೊಂಡಿದೆ.

