ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಟಿ20 ವಿಶ್ವಕಪ್‌ನಲ್ಲಿ ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ಟೀಂ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಕೊನೆಗೂ ಫೀನಿಕ್ಸ್‌ನಂತೆ ಎದ್ದು ಬಂದಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್, ಅದ್ಭುತ ಅರ್ಧಶತಕ ಸಿಡಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಕೇವಲ 26 ಎಸೆತಗಳಲ್ಲಿ 50 ರನ್ ಚಚ್ಚಿದ ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 4 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಈ ಪ್ರದರ್ಶನದ ಮೂಲಕ ಅವರು ಟಿ20 ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದರು.
ವಿಶ್ವಕಪ್ ಆರಂಭಕ್ಕೂ ಮುನ್ನ ಭರ್ಜರಿ ಫಾರ್ಮ್‌ನಲ್ಲಿದ್ದರೂ, ಲೀಗ್ ಹಂತದಲ್ಲಿ ಅಭಿಷೇಕ್ ರನ್ ಗಳಿಸಲು ಪರದಾಡಿದ್ದರು. ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಎಂಟು ಎಸೆತಗಳನ್ನು ಎದುರಿಸಿ ಒಂದೂ ರನ್ ಗಳಿಸದೆ ನಿರಾಸೆ ಮೂಡಿಸಿದ್ದ ಅವರು, ದಕ್ಷಿಣ ಆಫ್ರಿಕಾ ವಿರುದ್ಧ 15 ರನ್ ಗಳಿಸಿ ಲಯ ಕಂಡುಕೊಳ್ಳುವ ಮುನ್ಸೂಚನೆ ನೀಡಿದ್ದರು.
ಟೀಂ ಇಂಡಿಯಾದ ಆರಂಭಿಕ ಜೋಡಿಯ ಬಗ್ಗೆ ಇದ್ದ ಆತಂಕ ಈಗ ದೂರಾದಂತಿದೆ. ನಾಕೌಟ್ ಹಂತದ ಪಂದ್ಯಗಳಿಗೂ ಮುನ್ನ ಅಭಿಷೇಕ್ ಶರ್ಮಾ ಫಾರ್ಮ್‌ಗೆ ಮರಳಿರುವುದು ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.



