ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರೂರ್‌ನಲ್ಲಿ ನಡೆದ ಟಿಎಂಕೆ (ತಳಪತಿ ಮಕಲ್ ಕಳಗಂ) ಚುನಾವಣಾ ರ‍್ಯಾಲಿಯ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 41 ಜನರು ಪ್ರಾಣ ಕಳೆದುಕೊಂಡ ಘಟನೆ ತಮಿಳುನಾಡು ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಯ ಬಳಿಕ, ಟಿಎಂಕೆ ಮುಖ್ಯಸ್ಥ ಮತ್ತು ಜನಪ್ರಿಯ ನಟ ವಿಜಯ್ ಈಗ ಮೃತರ ಕುಟುಂಬಸ್ಥರನ್ನು ಖಾಸಗಿಯಾಗಿ ಭೇಟಿ ಮಾಡಿ ಸಾಂತ್ವನ ಹೇಳಲು ನಿರ್ಧರಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಅಕ್ಟೋಬರ್ 27 ರಂದು ಚೆನ್ನೈ ಸಮೀಪದ ಮಹಾಬಲಿಪುರಂನ ಖಾಸಗಿ ರೆಸಾರ್ಟ್‌ನಲ್ಲಿ ವಿಜಯ್ ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಗಾಗಿ ಸುಮಾರು 50 ಕೊಠಡಿಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ಪ್ರತಿ ಕುಟುಂಬವನ್ನು ನಟ ಖಾಸಗಿಯಾಗಿ ಭೇಟಿಯಾಗಿ ಅವರ ದುಃಖ ಹಂಚಿಕೊಳ್ಳಲಿದ್ದಾರೆ ಎಂದು ಟಿಎಂಕೆ ಪ್ರಕಟಿಸಿದೆ.
ಮೃತರ ಕುಟುಂಬಗಳು ರೆಸಾರ್ಟ್‌ಗೆ ಸುಲಭವಾಗಿ ತಲುಪುವಂತೆ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಭೇಟಿಯ ವೇಳೆ ಯಾವುದೇ ಮಾಧ್ಯಮ ಅಥವಾ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಇರಲಿಲ್ಲ ಎಂದು ತಿಳಿಸಲಾಗಿದೆ, ಕಾರಣ ಕುಟುಂಬಗಳಿಗೆ ಗೌಪ್ಯತೆ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಕೈಗೊಳ್ಳಲಾಗಿದೆ.

