ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಎರಡು ವರ್ಷಗಳ ಕಾಲ ಹಿಂಸಾಚಾರದ ಗೂಡಾಗಿದ್ದ ಮಣಿಪುರದಲ್ಲಿ ಇದೀಗ ಶಾಂತಿಯ ಸೂರ್ಯೋದಯವಾಗುತ್ತಿದೆ. ಮೈತೇಯಿ ಸಮುದಾಯಕ್ಕೆ ನಿರ್ಬಂಧಿಸಲಾಗಿದ್ದ ಹೆದ್ದಾರಿಗಳನ್ನು ಕುಕಿ ಬುಡಕಟ್ಟು ಸಮುದಾಯ ತೆರೆಯಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರಕ್ಕೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕುತ್ತಿದ್ದಾರೆ.
2023ರಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದ ಬಳಿಕ ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಮಣಿಪುರ ಭೇಟಿ. ಮಿಜೋರಾಂನ ಐಜ್ವಾಲ್‌ನಿಂದ ಮಧ್ಯಾಹ್ನ ಚುರಾಚಂದ್‌ಪುರಕ್ಕೆ ಆಗಮಿಸಿ, ಕುಕಿ ಸಮುದಾಯ ಬಹುಸಂಖ್ಯಾತವಾಗಿರುವ ಪ್ರದೇಶದಲ್ಲಿ 7,300 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅಡಿಗಲ್ಲು ಇಡಲಿದ್ದಾರೆ. ನಂತರ ಮೈತೇಯಿ ಸಮುದಾಯದ ಇಂಫಾಲ್‌ನಲ್ಲಿ 1,200 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಟ್ಟಾರೆ 8,500 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ.
ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಾತುಕತೆಯ ನಂತರ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ರಾಷ್ಟ್ರೀಯ ಹೆದ್ದಾರಿ-2 ಪುನಃ ತೆರೆದಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ಇದರ ಫಲಕಾರಿತ್ವ ಗೋಚರಿಸಿದೆ. ಕುಕಿ-ಝೋ ಕೌನ್ಸಿಲ್ ಭದ್ರತಾ ಪಡೆಗಳೊಂದಿಗೆ ಸೇರಿ ಶಾಂತಿ ಕಾಪಾಡುವುದಾಗಿ ಭರವಸೆ ನೀಡಿದೆ.
ಪ್ರಧಾನಿ ಮೋದಿ ಚುರಾಚಂದ್‌ಪುರ ಮತ್ತು ಇಂಫಾಲ್ ಎರಡೂ ಕಡೆ ಸ್ಥಳಾಂತರಗೊಂಡ ಕುಟುಂಬಗಳೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ನಂತರ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ನೀಡುವ ನಿರೀಕ್ಷೆ ಇದೆ.
2023ರ ಮೇ ತಿಂಗಳಲ್ಲಿ ಮಣಿಪುರ ಹೈಕೋರ್ಟ್ ಎಸ್‌ಟಿ ಹಕ್ಕಿನ ಶಿಫಾರಸು ಕುರಿತ ಆದೇಶದ ಬಳಿಕ ಬುಡಕಟ್ಟು ಸಮುದಾಯಗಳ ಮೆರವಣಿಗೆಯಿಂದ ಸಂಘರ್ಷ ಉಂಟಾಯಿತು. ಕೆಲವೇ ದಿನಗಳಲ್ಲಿ ಪರಿಸ್ಥಿತಿ ಹತೋಟಿ ತಪ್ಪಿ 260ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಸೈನ್ಯ, ಸಿಆರ್‌ಪಿಎಫ್ ಹಾಗೂ ಅಸ್ಸಾಂ ರೈಫಲ್ಸ್ ನಿಯೋಜನೆಗೊಂಡರು ಸದ್ದಿಲ್ಲದೆ ಗುಂಡಿನ ಚಕಮಕಿಗಳು ನಡೆದವು. ಅಂತಿಮವಾಗಿ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕಾಯಿತು ಮತ್ತು ರಾಷ್ಟ್ರಪತಿ ಆಡಳಿತ ಜಾರಿಯಾಯಿತು.