ಹೊಸದಿಗಂತ ಯಲ್ಲಾಪುರ:
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಾಟ್‌ನಲ್ಲಿ ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ (ಟಿ.ಟಿ) ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸಂಭವಿಸಿದೆ. ಚೆನ್ನೈನಿಂದ ಗೋಕರ್ಣ ಪ್ರವಾಸಕ್ಕೆಂದು ತೆರಳುತ್ತಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿದ್ದ ವಾಹನ ಇದಾಗಿದ್ದು, ಘಟನೆಯಲ್ಲಿ ಸುಮಾರು 5 ರಿಂದ 7 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ದಾರಿಹೋಕರು ನೆರವಿಗೆ ಧಾವಿಸಿದ್ದಾರೆ. ಗಾಯಾಳುಗಳನ್ನು ಖಾಸಗಿ ಕಾರುಗಳು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಅಂಬುಲೆನ್ಸ್ ಹಾಗೂ 108 ವಾಹನಗಳ ಮೂಲಕ ತುರ್ತಾಗಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಅಪಘಾತದ ಸ್ಥಳದಲ್ಲಿ ಟ್ರಾಫಿಕ್ ಪಿಎಸ್ಐ ಸಿದ್ದು ಗುಡಿ, ಸಾಮಾಜಿಕ ಕಾರ್ಯಕರ್ತರಾದ ಬಾಲಕೃಷ್ಣ ನಾಯ್ಕ ಅರಬೈಲ್ ಹಾಗೂ ಸತೀಶ ನಾಯ್ಕ ಅವರು ಸಕಾಲದಲ್ಲಿ ಸ್ಪಂದಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಶ್ರಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಘಾಟ್‌ನ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.



