ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಸ್ತೆಗುಂಡಿಗಳು ಜನರ ಜೀವಕ್ಕೆ ಹಾನಿ ಮಾಡಿರುವುದು ಕೇಳಿರುತ್ತೇವೆ. ಆದರೆ ಇಲ್ಲಿ ಗುಂಡಿಯೊಂದು ಮಹಿಳೆಯೊಬ್ಬರ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಫಿಲಿಬಿಟ್ ಜಿಲ್ಲೆಯ 50 ವರ್ಷದ ವಿನಿತಾ ಶುಕ್ಲಾ ರಸ್ತೆ ಗುಂಡಿನಿಂದಾಗಿ ಸಾವಿನ ದವಡೆಯಿಂದ ಮಹಿಳೆ ಪಾರಾಗಿದ್ದಾರೆ.
ವರದಿಗಳ ಪ್ರಕಾರ, ಬರೇಲಿ–ಹರಿದ್ವಾರ ರಾಷ್ಟ್ರೀಯ ಹೆದ್ದಾರಿ (NH-74)ಯಲ್ಲಿನ ಗುಂಡಿಗೆ ಆಂಬ್ಯುಲೆನ್ಸ್ ಬಿದ್ದ ಕಾರಣ, ವೈದ್ಯರು ಮೆದುಳು ನಿಷ್ಕ್ರೀಯವಾಗಿದೆ ಎಂದು ಹೇಳಿದ್ದ ಮಹಿಳೆ ಅಚ್ಚರಿಯ ರೀತಿಯಲ್ಲಿ ಮತ್ತೆ ಜೀವಂತವಾಗಿರುವ ಘಟನೆ ನಡೆದಿದೆ.
ಪಿಲಿಬಿಟ್ ನ ನ್ಯಾಯಾಲಯಗಳ ನಕಲು ವಿಭಾಗದಲ್ಲಿ ಹಿರಿಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನಿತಾ ಶುಕ್ಲಾ ಅವರು, ಫೆಬ್ರವರಿ 22ರಂದು ಮನೆಯಲ್ಲೇ ಕೆಲಸ ಮಾಡುತ್ತಿದ್ದ ವೇಳೆ ಅವರು ಹಠಾತ್ತನೆ ಪ್ರಜ್ಞೆ ತಪ್ಪಿ ಬಿದ್ದರು. ಕುಟುಂಬದವರು ತಕ್ಷಣವೇ ಅವರನ್ನು ಪಿಲಿಭಿಟ್‌ನ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚು ಸೌಲಭ್ಯಗಳಿರುವ ಬರೇಲಿಯ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಬಳಿಕ ಅವರನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ವೇಳೆರೆ ವೈದ್ಯರು ಮೆದುಳು ಕಾರ್ಯನಿರ್ವಹಣೆ ಬಹುತೇಕ ನಿಂತಿದೆ ಎಂದು ತಿಳಿಸಿ, ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಕುಟುಂಬಕ್ಕೆ ತಿಳಿಸಿದ್ದರು.ಹೀಗಾಗಿ ಕುಟುಂಬದವರು ಭಾರೀ ನೋವಿನಲ್ಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಕೂಡ ಆರಂಭಿಸಿದ್ದರು.
ಫೆಬ್ರವರಿ 24 ರಂದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಪತ್ನಿಯನ್ನುಪತಿ ಕುಲದೀಪ್ ಕುಮಾರ್ ಶುಕ್ಲಾ ಅವರು ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕರೆತರುತ್ತಿದ್ದರು.ಈ ವೇಳೆ ಬರೇಲಿ–ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯ ಹಫೀಜ್‌ಗಂಜ್ ಸಮೀಪದ ಹಾನಿಗೊಳಗಾದ ರಸ್ತೆಯಲ್ಲಿ ಆಂಬ್ಯುಲೆನ್ಸ್ ದೊಡ್ಡ ಗುಂಡಿಗೆ ಬಿತ್ತು. ಆ ಕ್ಷಣಗಳಲ್ಲೇ ಅಚ್ಚರಿಯ ರೀತಿಯಲ್ಲಿ ವಿನೀತಾ ಮತ್ತೆ ಉಸಿರಾಟ ಆರಂಭಿಸಿದರು. ಈ ಅನಿರೀಕ್ಷಿತ ಬೆಳವಣಿಗೆ ಕುಟುಂಬದವರಿಗೆ ಅಚ್ಚರಿ ಮೂಡಿಸಿತು.
ಈ ಬಗ್ಗೆ ಮಾತನಾಡಿದ ವಿನೀತಾ ಅವರ ಪತಿ ಕುಲದೀಪ್ ಕುಮಾರ್ ಶುಕ್ಲಾ, ಆಂಬ್ಯುಲೆನ್ಸ್ ಗುಂಡಿಗೆ ಬಿದ್ದ ಬಳಿಕ ನನ್ನ ಪತ್ನಿ ಮತ್ತೆ ಉಸಿರಾಡಲು ಆರಂಭಿಸಿದರು. ನಾನು ತಕ್ಷಣವೇ ಮನೆಯವರಿಗೆ ಕರೆ ಮಾಡಿ ಅಂತ್ಯಕ್ರಿಯೆಯ ಸಿದ್ಧತೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ತಿಳಿಸಿದೆ. ಇದು ಪವಾಡಕ್ಕಿಂತ ಕಡಿಮೆ ಅಲ್ಲ ಎಂದು ಹೇಳಿದ್ದಾರೆ.
ತಕ್ಷಣವೇ ಪಿಲಿಭಿಟ್‌ನ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಕೆಲವು ದಿನಗಳ ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವಿನೀತಾ ಇದೀಗ ಎಚ್ಚರವಾಗಿದ್ದು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅವರ ಪತಿ ತಿಳಿಸಿದ್ದಾರೆ.



