ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ತಿಂಗಳ ಹವಾಮಾನ ಬದಲಾವಣೆ ಹಾಗೂ ವೈಪರೀತ್ಯದಿಂದಾಗಿ ಸಂಪೂರ್ಣ ನೆಲ ಕಚ್ಚಿದ್ದ ಮೀನುಗಾರಿಕೆ ಚಟುವಟಿಕೆ ಇದೀಗ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಲಕ್ಷಾಂತರ ಮೀನುಗಳ ಬೃಹತ್ ಬೇಟೆ ದೊರೆತಿದ್ದು, ಅವರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಾರವಾರ, ಬೇಲಿಕೇರಿ ಮತ್ತು ಮುದಗ ಬಂದರುಗಳಿಂದ ಅರಬ್ಬಿ ಸಮುದ್ರಕ್ಕೆ ಇಳಿದ ಮೀನುಗಾರರು ಈ ಬಾರಿ ಭಾರೀ ಪ್ರಮಾಣದ ತಾರ್ಲೆ ಮೀನುಗಳ ರಾಶಿಯನ್ನು ಹಿಡಿದಿದ್ದಾರೆ. ವಿಶಿಷ್ಟವೆಂದರೆ, ಆಳ ಸಮುದ್ರಕ್ಕೆ ಹೋಗುವ ಬದಲು, ಈ ಮೀನುಗಳ ದಂಡು ತೀರ ಪ್ರದೇಶದ ಸಮೀಪದಲ್ಲೇ ಪತ್ತೆಯಾಗಿದ್ದು, ಮೀನುಗಾರಿಕೆ ಬಹು ಸುಲಭ ಹಾಗೂ ಫಲಪ್ರದವಾಗಿದೆ.
ಸಮುದ್ರದಲ್ಲಿ ಮೀನುಗಳ ಮಹಾಪೂರವೇ ಹರಿದು ಬರುತ್ತಿದ್ದು, ಜಾಲ ಬೀಸಿದ ಮೀನುಗಾರರ ದೋಣಿಗಳು ಭರ್ತಿಯಾಗಿ ವಾಪಸಾಗಿವೆ. ಕಳೆದ ಹಲವು ವರ್ಷಗಳಲ್ಲಿ ಈ ಮಟ್ಟದ ತಾರ್ಲೆ ಮೀನುಗಳ ಬೇಟೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಮಳೆಯ ಕಾರಣದಿಂದ ಹಾಗೂ ಸಮುದ್ರದ ಅಸ್ಥಿರತೆಯಿಂದ ಕಂಗೆಟ್ಟಿದ್ದ ಮೀನುಗಾರರ ಬದುಕು, ಈ ಬೃಹತ್ ಮತ್ಸ್ಯ ಸಂಪತ್ತಿನಿಂದ ಮತ್ತೆ ಪುನಶ್ಚೇತನಗೊಳ್ಳುವ ಭರವಸೆ ಮೂಡಿದೆ. ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ಶುರುವಾದ ಈ ‘ಬಂಪರ್ ಬೇಟೆ’ಯಿಂದಾಗಿ ಕರಾವಳಿ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ.

