Sunday, November 2, 2025

ಒಂದು ವಾರ ಆಯ್ತು, ಕಸದ ಗಾಡಿ ಬಂದಿಲ್ಲ! ಅಧಿಕಾರಿಗಳ ಮೇಲೆ ಸುರೀಬೇಕಷ್ಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಸ್ತೆಯಲ್ಲಿ ಕಸ ಸುರಿಯೋಕೆ ನಮಗೂ ಇಷ್ಟ ಇಲ್ಲ. ಬಟ್‌ ಕಸ ಎಲ್ಲಿಗೆ ಹಾಕ್ಬೇಕು? ದಿನವೂ ಕಸದ ಗಾಡಿ ಬಂದ್ರೆ ಕಸವನ್ನು ಹಾಕಿಬಿಡಬಹುದು. ಅಥವಾ ಎರಡು ದಿನಕ್ಕೊಮ್ಮೆಯಾದರೂ ಬರಬೇಕಲ್ವಾ? ಮನೆಯಲ್ಲಿ ಗಬ್ಬು ವಾಸನೆ ಬರುವ ಕಸವನ್ನು ನಾವು ಎಷ್ಟು ದಿನ ಇಟ್ಟುಕೊಳ್ಳೋಕೆ ಸಾಧ್ಯ? ಏರಿಯಾಗೊಂದು ದೊಡ್ಡ ಡಸ್ಟ್‌ಬಿನ್‌ ಕೂಡ ಇಲ್ಲ ಎಂದು ಜನರು ಗರಂ ಆಗಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಕಸ ಸುರಿಯುವವರ ಮನೆಗೆ ಮಾರ್ಷಲ್‌ಗಳನ್ನು ಕಳುಹಿಸಿ ಕಸವನ್ನು ಅವರ ಮನೆಯ ಮುಂದೆಯೇ ಹಾಕಿಸುತ್ತಿದ್ದಾರೆ. ಜೊತೆಗೆ ದಂಡ ವಿಧಿಸುತ್ತಿದ್ದಾರೆ. ಇದರಿಂದ ಜನ ಗರಂ ಆಗಿದ್ದಾರೆ.

’15 ದಿನ ಆಯ್ತು. ಕಸದ ಗಾಡಿಯೇ ಬಂದಿಲ್ಲ. ನಾವೆಲ್ಲಿ ಕಸ ಹಾಕಬೇಕು. ಕಸ ಎತ್ತೋಕೂ ಕಾಸು ಕೇಳ್ತಾರೆ’ ಎಂದು ಲಗ್ಗೆರೆಯ ನಿವಾಸಿಗಳು ತಮ್ಮ ಮನೆಗಳ ಮುಂದೆಯೇ ಡಬ್ಬಿಗಳಲ್ಲಿ ಕಸ ಇಟ್ಟುಕೊಂಡು ಅಸಮಾಧಾನ ಹೊರಹಾಕಿದ್ದಾರೆ. ‘ಅಧಿಕಾರಿಗಳು ಬರಲಿ. ಅವರ ತಲೆಯ ಮೇಲೆಯೇ ಕಸ ಸುರಿಯುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕಬ್ಬನ್‌ಪೇಟೆಯಲ್ಲಿ ಕಸದ ಸಮಸ್ಯೆ ಇದೆ. ಕಸದ ವಾಹನಗಳು ಬರೋದೇ ಇಲ್ಲ. ಜನ ಕಸ ಹಾಕ್ತಾರೆ ಅಂತ ಮನೆ ಮುಂದೆ ಕಸ ಸುರಿಯುತ್ತೀರಿ. ಕಸದ ವಾಹನಗಳೇ ಬರಲ್ಲ ಅಂದ್ರೇ ಏನ್ ಮಾಡೋದು? ಜಿಬಿಎ ಕಚೇರಿ ಮುಂದೆ ಕಸ ಸುರಿದ್ರೇ ಒಪ್ತೀರಾ? ಕಸದ ವಾಹನ ಕಳಿಸಲ್ಲ ಅಂದ್ರೆ ಜಿಬಿಎ ಅಧಿಕಾರಿಗಳ ಮನೆ ಮುಂದೆ ಹಾಕ್ತೀವಿ. ಕೆಲವು ಕಡೆ ಕಸದ ವಾಹನ ಬರೋದು ಗೊತ್ತೇ ಆಗಲ್ಲ. ಕಸ ವಿಲೇವಾರಿ ಮಾಡಿಲ್ಲ ಅಂದ್ರೆ ಕಸವನ್ನ ಮನೆಯಲ್ಲಿ ಇಟ್ಕೋಬೇಕಾ? ನೀವು ವ್ಯವಸ್ಥೆ ಮಾಡಿಲ್ಲ ಅಂದ್ರೆ ಕಸ ಎಲ್ಲಿ ಹಾಕೋದು. ಮೊದಲು ವ್ಯವಸ್ಥೆ ಸರಿ ಮಾಡಿ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

error: Content is protected !!