ಹೊಸದಿಗಂತ ಮಡಿಕೇರಿ:
ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸೋಮವಾರ ಬೆಳಗಿನ ಜಾವ ರೆಸಾರ್ಟ್ ಉದ್ಯೋಗಿಯೊಬ್ಬರು ಆನೆಯ ದಾಳಿಯಿಂದ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ಕರಡಿಗೋಡು ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಪುಟ್ಟುಸ್ವಾಮಿ ಎಂಬುವವರು ಇಂದು ಮುಂಜಾನೆ ಎಂದಿನಂತೆ ತಮ್ಮ ಬೈಕಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಕರಡಿಗೋಡು ರಸ್ತೆಯಲ್ಲಿ ಸಾಗುತ್ತಿದ್ದಾಗ ಹಠಾತ್ ಎದುರಾದ ಕಾಡಾನೆಯೊಂದು ಅವರ ಮೇಲೆ ದಾಳಿಗೆ ಮುಂದಾಗಿದೆ. ಭಯಭೀತರಾದ ಪುಟ್ಟುಸ್ವಾಮಿ ತಕ್ಷಣವೇ ಚತುರತೆ ಮೆರೆದು ಬೈಕನ್ನು ಅಲ್ಲೇ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು, ಕಟಾವಿಗೆ ಬಂದಿರುವ ಅಪಾರ ಪ್ರಮಾಣದ ಕಾಫಿ ಫಸಲನ್ನು ತುಳಿದು ನಾಶಪಡಿಸಿವೆ. ಇದರಿಂದ ಕೃಷಿಕರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾಗಿದ್ದಾರೆ.
ಜೀವ ಮತ್ತು ಆಸ್ತಿಪಾಸ್ತಿಗೆ ನಿರಂತರ ಭೀತಿ ಎದುರಾಗುತ್ತಿದ್ದರೂ ಅರಣ್ಯ ಇಲಾಖೆ ಮೌನಕ್ಕೆ ಶರಣಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



