February 22, 2026
Sunday, February 22, 2026
spot_img

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಯುವಕ ಕಾವೇರಿ ನದಿಯ ಸುಳಿಗೆ ಸಿಲುಕಿ ದಾರುಣ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಶನಿವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಯುವಕನೋರ್ವ ಕಾವೇರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.

ಬೆಂಗಳೂರಿನ ಪಾಪಯ್ಯ ಗಾರ್ಡನ್ ನಿವಾಸಿ ಆರ್. ವಿಜಯ್ ಕುಮಾರ್ ಅವರ ಪುತ್ರ ಭಾರ್ಗವ್ (22) ಮೃತಪಟ್ಟ ದುರ್ದೈವಿ. ಈತ ಬೆಂಗಳೂರಿನ ಬನಶಂಕರಿಯ ಖಾಸಗಿ ಶಾಲೆಯೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಶನಿವಾರ ತನ್ನ ಎಂಟು ಮಂದಿ ಸ್ನೇಹಿತರೊಡಗೂಡಿ ಆಟೋ ಮತ್ತು ಕಾರಿನಲ್ಲಿ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದನು.

ದೇವರ ದರ್ಶನ ಪಡೆದು, ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಭಾರ್ಗವ್ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಇಳಿದಿದ್ದಾನೆ. ಈ ವೇಳೆ ನದಿಯ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿದ ಭಾರ್ಗವ್, ನಿಯಂತ್ರಣ ಸಿಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಕೂಡಲೇ ಸ್ಥಳೀಯ ನುರಿತ ಈಜುಗಾರರು ಕಾರ್ಯಾಚರಣೆ ನಡೆಸಿ, ಯುವಕನ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಆನಂದವಾಗಿ ಕಳೆಯಬೇಕಿದ್ದ ಪ್ರವಾಸದ ಹಾದಿ ಸಾವು-ನೋವಿನೊಂದಿಗೆ ಅಂತ್ಯಗೊಂಡಿರುವುದು ಸ್ನೇಹಿತರು ಮತ್ತು ಕುಟುಂಬಸ್ಥರಲ್ಲಿ ಮಡುಗಟ್ಟಿದ ಶೋಕ ತಂದಿದೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !