Monday, November 10, 2025

ಕೈಗಾ ಅಣು ಸ್ಥಾವರದಲ್ಲಿ ದುರ್ಘಟನೆ: ಗೇಟ್‌ ಬಿದ್ದು ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಯೋಧ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ತ್ಯಾಜ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯೋಧ ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಯೋಧನನ್ನು ಮಹಾರಾಷ್ಟ್ರದ ಮಹಿಮಾನಗಡ್ ಮೂಲದ ಶೇಖರ್ ಭೀಮರಾವ್ ಜಗದಾಲೆ (48) ಎಂದು ಗುರುತಿಸಲಾಗಿದೆ.

ಘಟನೆಯ ಸಮಯದಲ್ಲಿ ಅವರು ಘಟಕದ ಮುಖ್ಯ ಪ್ರವೇಶ ದ್ವಾರದಲ್ಲಿ ಕಾವಲು ಕಾಯುತ್ತಿದ್ದರು. ಅಕಸ್ಮಾತ್ತಾಗಿ ಭಾರದ ಲೋಹದ ಗೇಟ್ ಒಂದು ಭಾಗ ತುಂಡಾಗಿ ಅವರ ಮೈಮೇಲೆ ಬಿದ್ದಿದೆ. ಈ ವೇಳೆ ಶೇಖರ್ ಅವರ ತಲೆಗೆ ಹಾಗೂ ಹೆಗಲು ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅಸ್ವಸ್ಥ ಸ್ಥಿತಿಯಲ್ಲಿ ನೆಲಕ್ಕುರುಳಿದ್ದರು.

ಸಹೋದ್ಯೋಗಿಗಳು ತಕ್ಷಣವೇ ಅವರನ್ನು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೈಗಾ ಕೆಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

error: Content is protected !!