ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪುಕೋಟೆ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ತೀವ್ರಗೊಳಿಸಿದ್ದು, ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿಗೆ ಆಶ್ರಯ ನೀಡಿದ್ದ ಆರೋಪಿಯನ್ನು ಬುಧವಾರ ಬಂಧನಕ್ಕೊಳಪಡಿಸಿದೆ.
ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್ ಬಂಧಿತ ಆರೋಪಿ. ಈತನ ಬಂಧನದೊಂದಿಗೆ ಪ್ರಕರಣ ಸಂಬಂಧ ಈ ವರೆಗೂ ಬಂಧನಕ್ಕೊಳಗಾರಿರುವವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಸೋಯಾಬ್ ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿಗೆ ಸ್ಫೋಟಕ್ಕೆ ಸ್ವಲ್ಪ ಮೊದಲು ಆಶ್ರಯ ನೀಡಿದ್ದು, ಲಾಜಿಸ್ಟಿಕ್ ಸಹಾಯ ಮಾಡಿದ್ದಾನೆ ಎಂಬ ಸಾಕ್ಷ್ಯಗಳು ಎನ್ಐಎಗೆ ದೊರೆತಿವೆ. ಈ ಹಿನ್ನೆಲೆಯಲ್ಲಿ ಸೋಯಾಬ್ ಖಾನ್ನನ್ನು ಎನ್ಐಎ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬಂಧನದಲ್ಲಿರುವ ಡಾ. ಮುಜಮ್ಮಿಲ್ ಶಕೀಲ್ ಗನೈ ಜೊತೆಗೆ ಸೋಯಾಬ್ ಮನೆಗೆ ಎನ್‌ಐಎ ದಾಳಿ ನಡೆಸಿದ ವೇಳೆ ಮನೆಯಲ್ಲಿ ಗ್ರೈಂಡರ್ ಮತ್ತು ಪೋರ್ಟಬಲ್ ಫರ್ನೇಸ್ ಪತ್ತೆಯಾಗಿದ್ದು, ಇವುಗಳನ್ನು ಐಇಡಿ ತಯಾರಿಕೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿದೆ.

