ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ನಡೆದ 10 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ವಿಕೃತ ಕೃತ್ಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಅತಿಯಾದ ಮದ್ಯದ ನಶೆಯಲ್ಲಿದ್ದ ಆರೋಪಿ ಕಾರ್ತಿಕ್, ಬಾಲಕಿಯನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ದಸರಾ ಪ್ರಯುಕ್ತ ಬಲೂನ್ ವ್ಯಾಪಾರಕ್ಕಾಗಿ ಪೋಷಕರೊಂದಿಗೆ ಮೈಸೂರಿಗೆ ಬಂದಿದ್ದ ಬಾಲಕಿ ರಸ್ತೆ ಬದಿಯಲ್ಲಿ ಗಾಢ ನಿದ್ರೆಯಲ್ಲಿದ್ದಳು. ಕಳೆದ ಬುಧವಾರ ರಾತ್ರಿ 2 ಗಂಟೆ ಸುಮಾರಿಗೆ ಬಾಲಕಿಯನ್ನು ಹೊತ್ತೊಯ್ದ ಆರೋಪಿ, ಅತ್ಯಾಚಾರ ಎಸಗಿದ್ದಾನೆ.
ನಂತರ, ಆತ ಕ್ರೌರ್ಯದಿಂದ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯ ಪ್ರಕಾರ, ಆಕೆಯ ಕತ್ತು, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇದಲ್ಲದೆ, ಆಕೆಯ ಮರ್ಮಾಂಗಕ್ಕೂ ಚಾಕುವಿನಿಂದ ಏಳರಿಂದ ಎಂಟು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ಬಳಿಕ ಶವವನ್ನು ಸಮೀಪದ ಮೋರಿಗೆ ಎಸೆದು ಪರಾರಿಯಾಗಿದ್ದ. ಈ ಭೀಕರ ಘಟನೆ ಮೈಸೂರಿನ ಅರಮನೆ ಮುಂಭಾಗದ ಇಟ್ಟಿಗೆಗೂಡಿನ ಖಾಲಿ ಜಾಗದಲ್ಲಿ ನಡೆದಿತ್ತು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮೈಸೂರು ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಕೊಳ್ಳೇಗಾಲದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಮೈಸೂರಿಗೆ ಕರೆತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ, ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ.