ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದ ಯುವ ನಟ ಸಚಿನ್ ಚಂದ್ವಾಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ 25 ವರ್ಷದ ಈ ಪ್ರತಿಭಾವಂತ ನಟ ಪುಣೆಯಲ್ಲಿರುವ ತಮ್ಮದೇ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 23ರಂದು ಸಚಿನ್ ತಮ್ಮ ಮನೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬಸ್ಥರು ತಕ್ಷಣ ಬಾಗಿಲು ಮುರಿದು ಅವರನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಪ್ರಯತ್ನಗಳ ನಡುವೆಯೇ ಸಚಿನ್ ಕೊನೆಯುಸಿರೆಳೆದರು. ಇದೀಗ ಸಚಿನ್ ಚಂದ್ವಾಡೆ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಅಧಿಕೃತ ಮಾಹಿತಿ ನೀಡಿದ್ದಾರೆ.
ಸಚಿನ್ ಅವರ ಆತ್ಮಹತ್ಯೆಯ ಹಿಂದೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಪರೋಲಾ ಠಾಣೆ ಪೊಲೀಸರು “ಆಕಸ್ಮಿಕ ಸಾವು” ಎಂದು ಪ್ರಕರಣ ದಾಖಲಿಸಿದ್ದಾರೆ. ಕುಟುಂಬದವರು ಮತ್ತು ಸಹೋದ್ಯೋಗಿಗಳು ಈ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಸಚಿನ್ ಚಂದ್ವಾಡೆ ಪುಣೆಯ ಐಟಿ ಪಾರ್ಕ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಪುಣೆ ಮತ್ತು ಮುಂಬೈ ಚಿತ್ರರಂಗದಲ್ಲಿ ಅವಕಾಶಗಳನ್ನು ಹುಡುಕಿದರು. ನೆಟ್‌ಫ್ಲಿಕ್ಸ್‌ನ ಜಮ್ತಾರಾ 2 ವೆಬ್ ಸೀರೀಸ್ ಹಾಗು ಇತ್ತೀಚೆಗೆ “ಅಸುರವನ್” ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸಿದ್ದರು. ಕೇವಲ ಐದು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರದ ಬಗ್ಗೆ ಹಂಚಿಕೊಂಡಿದ್ದರು. ರಾಮಚಂದ್ರ ಮಾಂಗೋ ನಿರ್ದೇಶನದ ಈ ಚಿತ್ರದಲ್ಲಿ ಅವರು “ಸೋಮ” ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

