ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಗೆ ತೆಲುಗು ನಟ ರಾಣಾ ದಗ್ಗುಬಾಟಿ ಅವರು ಗೈರುಹಾಜರಾಗಿದ್ದಾರೆ.
ಮುಂಬೈನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಪೂರ್ವನಿಗದಿತ ಚಿತ್ರೀಕರಣದಲ್ಲಿ ನಿರತರಾಗಿರುವುದಾಗಿ ಕಾರಣ ನೀಡಿರುವ ರಾಣಾ, ವಿಚಾರಣೆಗೆ ಹಾಜರಾಗಲು ಹೊಸ ದಿನಾಂಕವನ್ನು ನೀಡುವಂತೆ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
‘ಫೇರ್‌ಪ್ಲೇ’ ಎಂಬ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಮೂಲಕ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ಈ ಬೆಟ್ಟಿಂಗ್ ಆ್ಯಪ್‌ನ ಪ್ರಚಾರ ರಾಯಭಾರಿಗಳಾಗಿ ಕೆಲಸ ಮಾಡಿದ ಸೆಲೆಬ್ರಿಟಿಗಳಿಗೆ ಭಾರಿ ಮೊತ್ತದ ಹಣವನ್ನು ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಭಾಗವಾಗಿ, ಇಡಿ ಅಧಿಕಾರಿಗಳು ಈ ಹಿಂದೆ ನಟಿ ತಮನ್ನಾ ಭಾಟಿಯಾ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಮುಂಬೈ ಇಡಿ ಕಚೇರಿಗೆ ಹಾಜರಾಗಿದ್ದ ತಮನ್ನಾ, ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇದೀಗ ಅರಾಣಾ ದಗ್ಗುಬಾಟಿ ಅವರಿಗೂ ಸಮನ್ಸ್ ನೀಡಲಾಗಿತ್ತು.
ಇಡಿ ಸಮನ್ಸ್ ಅನ್ವಯ ರಾಣಾ ದಗ್ಗುಬಾಟಿ ಅವರು ಮುಂಬೈನ ಇಡಿ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಹಾಜರಿರಬೇಕಿತ್ತು. ಆದರೆ, ತಮ್ಮ ವಕೀಲರ ಮೂಲಕ ಇಡಿಗೆ ಮಾಹಿತಿ ರವಾನಿಸಿರುವ ಅವರು, ನಾನು ಪ್ರಸ್ತುತ ನನ್ನ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇದು ಪೂರ್ವನಿಗದಿತವಾಗಿದ್ದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ತನಿಖೆಗೆ ಸಂಪೂರ್ಣ ಸಹಕಾರ ನೀಡಲು ನಾನು ಸಿದ್ಧನಿದ್ದು, ದಯವಿಟ್ಟು ವಿಚಾರಣೆಗೆ ಹಾಜರಾಗಲು ಬೇರೊಂದು ದಿನಾಂಕವನ್ನು ನಿಗದಿಪಡಿಸಬೇಕು ಎಂದು ಕೋರಿದ್ದಾರೆ.
ರಾಣಾ ಅವರ ಮನವಿಯನ್ನು ಇಡಿ ಅಧಿಕಾರಿಗಳು ಪರಿಗಣಿಸುತ್ತಿದ್ದು, ಶೀಘ್ರದಲ್ಲೇ ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ.