ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ದಳಪತಿ ವಿಜಯ್ ಸ್ಥಾಪಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಗೆ ಚುನಾವಣಾ ಆಯೋಗ ಅಧಿಕೃತವಾಗಿ ‘ವಿಸಿಲ್’ (Whistle) ಚಿಹ್ನೆ ನೀಡಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈ ಚಿಹ್ನೆಯಡಿ ಪಕ್ಷ ಸ್ಪರ್ಧಿಸಲಿದೆ.
ಚೆನ್ನೈನಲ್ಲಿ ಟಿವಿಕೆ ತನ್ನ ಮೊದಲ ಪ್ರಚಾರ ಸಮಿತಿ ಸಭೆ ನಡೆಸಿದ ಎರಡು ದಿನಗಳಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಸಾಮಾಜಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಕೇಂದ್ರಬಿಂದು ಮಾಡಿಕೊಂಡು ಪ್ರಣಾಳಿಕೆ ರೂಪಿಸುವುದಾಗಿ ಪಕ್ಷ ಘೋಷಿಸಿದೆ. ಇದಕ್ಕಾಗಿ ವಿಜಯ್ ಈಗಾಗಲೇ 12 ಸದಸ್ಯರ ಚುನಾವಣಾ ಸಮಿತಿಯನ್ನು ರಚಿಸಿದ್ದು, ಜಿಲ್ಲೆ ಹಾಗೂ ಕ್ಷೇತ್ರ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಕಾರ್ಯ ಆರಂಭವಾಗಿದೆ.
2024ರಲ್ಲಿ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ಟಿವಿಕೆ, ಫೆಬ್ರವರಿಯಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಘೋಷಿಸಿತ್ತು. ಜಾತಿ ಮುಕ್ತ, ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಮೂಲಭೂತ ರಾಜಕೀಯ ಬದಲಾವಣೆ ಪಕ್ಷದ ಗುರಿಯಾಗಿದೆ ಎಂದು ವಿಜಯ್ ಪುನರುಚ್ಚರಿಸಿದ್ದಾರೆ. “ಸ್ವಾರ್ಥರಹಿತ, ಸ್ವಾಭಿಮಾನ ಆಧಾರಿತ ರಾಜಕಾರಣವೇ ನಮ್ಮ ದಾರಿ” ಎಂದು ಹೇಳಿದ್ದಾರೆ.


