ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂಬ ಗುಲ್ಲು ಗಾಂಧಿನಗರದಲ್ಲಿ ಜೋರಾಗಿತ್ತು. ಇದೀಗ ಈ ಸುದ್ದಿ ನಿಜವಾಗಿದ್ದು, ಇಂದು ವಿವಾಹ ಮಹೋತ್ಸವ ನಡೆದಿದೆ. ನವಜೋಡಿಗೆ ಸಿನಿಮಾ ಗಣ್ಯರು ಹಾಗೂ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಯೋಗಿ ಜಗ್ಗಿ ವಾಸುದೇವ್ ಅವರ ಅನುಯಾಯಿಯಾಗಿರುವ ಸಮಂತಾ, ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಆವರಣದಲ್ಲಿ ವಿವಾಹವಾಗಲು ನಿರ್ಧರಿಸಿದರು. ಪೂಜಾ ವಿಧಿ-ವಿಧಾನಗಳ ಜೊತೆಗೆ ರಾಜ್ ನಿಡಿಮೋರು ಅವರೊಂದಿಗಿನ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಪ್ಶನ್‌ನಲ್ಲಿ ಮದುವೆಯ ದಿನಾಂಕವನ್ನು ನಮೂದಿಸುವ ಮೂಲಕ ತಾವು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದನ್ನು ಅಧಿಕೃತಗೊಳಿಸಿದ್ದಾರೆ.

ಸಮಂತಾ ಈ ಹಿಂದೆ ಟಾಲಿವುಡ್ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಆದರೆ, ನಾಲ್ಕೇ ವರ್ಷಗಳ ಕಾಲ ಇದ್ದ ಈ ದಾಂಪತ್ಯವು ಬೇರ್ಪಡುವಿಕೆಯೊಂದಿಗೆ ಕೊನೆಗೊಂಡಿತ್ತು. ಆ ಬಳಿಕ ಸಮಂತಾ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿದ್ದರು. ಕಳೆದ ವರ್ಷಾಂತ್ಯದಲ್ಲಿ ನಾಗ ಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ ಅವರನ್ನು ವರಿಸಿದ್ದರು. ಇದೀಗ ಸಮಂತಾ ಅವರು ತಮ್ಮ ಆಪ್ತ ಗೆಳೆಯ ರಾಜ್ ನಿಡಿಮೋರು ಜೊತೆ ಹೊಸ ಜೀವನ ಪ್ರಾರಂಭಿಸಿದ್ದಾರೆ. ಈ ಮೂಲಕ ಇಬ್ಬರೂ ನಟ-ನಟಿಯರ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ತೆರೆದಂತಾಗಿದೆ.


