ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ವೆಂಕಟೇಶ್ ರೆಡ್ಡಿಗೆ 46 ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸಂತ್ರಸ್ತ ನಟಿ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಆರೋಪಿ ವಿರುದ್ಧ ಆರ್‌ಆರ್ ನಗರ (RR Nagar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣ ಗೋವಿಂದರಾಜನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ವಿಚಾರಣೆ ನಡೆಸಿದ ಪೊಲೀಸರು, ಆರೋಪಿಯನ್ನು 46 ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಮಂಜೂರು ನೀಡಿದೆ.
ಏನಿದು ಪ್ರಕರಣ?
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅರವಿಂದ್ ರೆಡ್ಡಿ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕನಾಗಿದ್ದ. ಜೊತೆಗೆ ಎವಿಆರ್ ಗ್ರೂಪ್ ಮಾಲೀಕನಾಗಿದ್ದ. ಅಲ್ಲದೇ ಚಲನಚಿತ್ರ ನಿರ್ಮಾಪಕ ಆಗಿರುವ ಅರವಿಂದ್ ರೆಡ್ಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ. ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಕೂಡ ಆಯೋಜಿಸಿದ್ದ. ಅರವಿಂದ್ ರೆಡ್ಡಿ ಒಡೆತನದ ಎವಿಆರ್ ಗ್ರೂಪ್ ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆ ನಡೆದ ಟೂರ್ನಮೆಂಟ್‌ಗೆ ಸ್ಪಾನ್ಸರ್ ಮಾಡಿತ್ತು. 2021ರಲ್ಲಿ ನಟಿ ಹಾಗೂ ಅರವಿಂದ್‌ಗೆ ಪರಿಚಯವಾಗಿತ್ತು. ಅದಾದ ಕೆಲವು ವರ್ಷಗಳ ಬಳಿಕ ಆತ ನಟಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಈ ಕುರಿತು ನಟಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

