January17, 2026
Saturday, January 17, 2026
spot_img

ಅಫ್ಘಾನ್ ಪವರ್‌ಗೆ ಹರಿಣಗಳು ಉಡೀಸ್: ಮಾಜಿ ಚಾಂಪಿಯನ್ ದ.ಆಫ್ರಿಕಾಕ್ಕೆ ಮುಖಭಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿರುವ 2026ರ ಅಂಡರ್-19 ವಿಶ್ವಕಪ್‌ನಲ್ಲೇ ಮೊದಲ ದೊಡ್ಡ ಅಚ್ಚರಿ ಹೊರಬಿದ್ದಿದೆ. ಮಾಜಿ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧ 28 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ ತಂಡ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.

ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆದ ಗ್ರೂಪ್‌ ‘ಡಿ’ ಹಂತದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ, ಆರಂಭಿಕ ಆಘಾತದ ಹೊರತಾಗಿಯೂ 8 ವಿಕೆಟ್‌ಗೆ 266 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ತಂಡದ ಚೇತರಿಕೆಗೆ ಕಾರಣವಾಗಿದ್ದು ಖಾಲಿದ್ ಅಹ್ಮದ್‌ಜೈ ಮತ್ತು ಫೈಸಲ್ ಶಿನೋಜಾಡಾ ಅವರ ಅಮೋಘ 152 ರನ್‌ಗಳ ಜೊತೆಯಾಟ. ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಶತಕದತ್ತ ಹೆಜ್ಜೆ ಹಾಕುತ್ತಿದ್ದಾಗ, ಕೇವಲ 4 ಎಸೆತಗಳ ಅಂತರದಲ್ಲಿ ಇಬ್ಬರೂ ವಿಕೆಟ್ ಒಪ್ಪಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಆದರೆ ಅಂತಿಮ ಹಂತದಲ್ಲಿ ಉಜೈರುಲ್ಲಾ ನಿಯಾಜೈ (51 ಎಸೆತಗಳಲ್ಲಿ 51 ರನ್) ಸಿಡಿಸಿದ ಅರ್ಧಶತಕ ತಂಡದ ಮೊತ್ತವನ್ನು 260ರ ಗಡಿ ದಾಟಿಸಿತು.

267 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ತತ್ತರಿಸಿತು. ಕೇವಲ 49 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಪರ ಜೇಸನ್ ರೋಲ್ಯಾಂಡ್ಸ್ (98 ರನ್) ಏಕಾಂಗಿ ಹೋರಾಟ ನಡೆಸಿದರೂ, ದುರದೃಷ್ಟವಶಾತ್ ಶತಕದ ಹೊಸ್ತಿಲಲ್ಲಿ ರನ್ ಔಟ್ ಆದರು. ದಕ್ಷಿಣ ಆಫ್ರಿಕಾದ ಒಟ್ಟು 10 ವಿಕೆಟ್‌ಗಳಲ್ಲಿ 4 ವಿಕೆಟ್‌ಗಳು ‘ರನ್ ಔಟ್’ ರೂಪದಲ್ಲಿ ಬಂದಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಅಫ್ಘಾನ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, 47.4 ಓವರ್‌ಗಳಲ್ಲಿ 238 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಅಫ್ಘಾನಿಸ್ತಾನ 28 ರನ್‌ಗಳ ರೋಚಕ ಜಯದೊಂದಿಗೆ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಬಲಿಷ್ಠವಾಗಿ ಆರಂಭಿಸಿದೆ.

Must Read

error: Content is protected !!