ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ನಡುವಿನ ಗಡಿ ಪ್ರದೇಶದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿ ಬಳಿಕ ಪಾಕಿಸ್ತಾನ್ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಅದರ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಡುರಾಂಡ್ ಲೈನ್ ಬಳಿ ಪಾಕಿಸ್ತಾನ ಸೈನಿಕರ ಮೇಲೆ ದಾಳಿ ನಡೆಸಿದ್ದವು. ಈ ಹಿನ್ನೆಲೆ ಈಗ ಮತ್ತೊಮ್ಮೆ ಪಾಕಿಸ್ತಾನ್ ಸೇನೆ ಗಡಿ ಭಾಗದಲ್ಲಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂವರು ಅಫ್ಘಾನಿಸ್ತಾನ ಕ್ರಿಕೆಟಿಗರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನ್ ಸ್ಥಳೀಯ ಆಟಗಾರರು ಸೌಹಾರ್ದ ಕ್ರಿಕೆಟ್ ಪಂದ್ಯಕ್ಕಾಗಿ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾಗೆ ತೆರಳುತ್ತಿದ್ದಾಗ ಪಾಕಿಸ್ತಾನ ವಾಯುದಾಳಿಗೆ ಸಿಲುಕಿದ್ದಾರೆ. ಈ ಘಟನೆಯಲ್ಲಿ ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂಬ ಮೂವರು ಯುವ ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಅಫ್ಘಾನಿಸ್ತಾನದ ಕ್ರೀಡಾ ಸಮುದಾಯದಲ್ಲಿ ಆಘಾತ ಉಂಟುಮಾಡಿದೆ. “ಈ ದಾಳಿಯು ನಮ್ಮ ದೇಶದ ಕ್ರಿಕೆಟ್ ಕುಟುಂಬಕ್ಕೆ ದೊಡ್ಡ ನಷ್ಟ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪ,” ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ರಕಟಣೆ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಫಜಲ್ಹಕ್ ಫಾರೂಕಿ ಮತ್ತು ಮೊಹಮ್ಮದ್ ನಬಿ ಪಾಕ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆ ಬಳಿಕ ಅಫ್ಘಾನ್ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನ ವಿರುದ್ಧದ ಮುಂದಿನ ಕ್ರಿಕೆಟ್ ಸರಣಿಯಲ್ಲಿ ತಂಡ ಭಾಗವಹಿಸುವುದೇ ಅನುಮಾನವಾಗಿದೆ.