Saturday, August 30, 2025

AIಗೆ ಸಂಬಂಧಿಸಿದಂತೆ ಗೂಗಲ್ ನೀಡಿದೆ ಹೊಸ ಎಚ್ಚರಿಕೆ! ಏನದು?

ಜಾಗತಿಕವಾಗಿ 1.8 ಶತಕೋಟಿ ಜಿಮೇಲ್ ಬಳಕೆದಾರರನ್ನು ಹೊಂದಿರುವ ಗೂಗಲ್ ಕಂಪನಿಯು ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಬಳಕೆಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಹತ್ವದ ಸೈಬರ್‌ ಸೆಕ್ಯುರಿಟಿ ಎಚ್ಚರಿಕೆ ಬಿಡುಗಡೆ ಮಾಡಿದೆ.

ಕಂಪನಿಯ ಎಚ್ಚರಿಕೆಯ ಪ್ರಕಾರ, “ಪರೋಕ್ಷ ಪ್ರಾಂಪ್ಟ್ ಇಂಜೆಕ್ಷನ್‌ಗಳು” (Indirect Prompt Injections) ಎಂಬ ಹೊಸ ತಂತ್ರದ ಮೂಲಕ ಹ್ಯಾಕರ್‌ಗಳು ಸರ್ಕಾರ, ಉದ್ಯಮಗಳು ಹಾಗೂ ಸಾಮಾನ್ಯ ಬಳಕೆದಾರರನ್ನು ಗುರಿಯಾಗಿಸುತ್ತಿದ್ದಾರೆ.

ಗೂಗಲ್ ಬ್ಲಾಗ್ ಪೋಸ್ಟ್ ಪ್ರಕಾರ, ಸೈಬರ್ ದಾಳಿಕೋರರು AI ಸಿಸ್ಟಂಗಳನ್ನು ನೇರವಾಗಿ ಹ್ಯಾಕ್ ಮಾಡುವ ಬದಲು ಇಮೇಲ್‌ಗಳು, ಡಾಕ್ಯುಮೆಂಟ್‌ಗಳು ಅಥವಾ ಕ್ಯಾಲೆಂಡರ್ ಆಹ್ವಾನಗಳೊಳಗೆ ದುರುದ್ದೇಶಪೂರಿತ ಸೂಚನೆಗಳನ್ನು ಅಡಗಿಸುತ್ತಾರೆ. ಈ ರೀತಿಯ ಹಿಡನ್‌ ಕಮಾಂಡ್ಸ್ AI ಗೆ ತಾನೇ ತಾನು ವಿರುದ್ಧವಾಗಿ ಕೆಲಸ ಮಾಡಿಸುವಂತೆ ಒತ್ತಾಯಿಸುತ್ತದೆ. ಇದರಿಂದ ಬಳಕೆದಾರರ ಡೇಟಾ ಸೋರಿಕೆಯಾಗುವುದು ಅಥವಾ ಪಾಸ್‌ವರ್ಡ್‌ಗಳಂತಹ ಸಂವೇದನಾಶೀಲ ಮಾಹಿತಿಗಳು ಕಳ್ಳತನವಾಗುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.

ಟೆಕ್ ತಜ್ಞ ಸ್ಕಾಟ್ ಪೋಲ್ಡರ್‌ಮನ್ ಪ್ರಕಾರ, ಈ ತಂತ್ರವು ಹಳೆಯ ಸ್ಕ್ಯಾಮ್‌ಗಳಿಗಿಂತ ಭಿನ್ನವಾಗಿದೆ. ಇದು “AI ವಿರುದ್ಧ AI” ದಾಳಿ ಆಗಿದ್ದು, ಯಾವುದೇ ಲಿಂಕ್ ಕ್ಲಿಕ್ ಮಾಡುವ ಅಗತ್ಯವಿಲ್ಲದೆ ಬಳಕೆದಾರರ ಲಾಗಿನ್ ವಿವರಗಳು ಬಯಲಾಗುವ ಸಾಧ್ಯತೆಯಿದೆ. ವಿಶೇಷವಾಗಿ ಜನರು AI ಯನ್ನು ವೈಯಕ್ತಿಕ ಸಲಹೆ, ಡೇಟಿಂಗ್ ಅಥವಾ ಸಂಬಂಧ ಸಲಹೆಗಾಗಿ ಬಳಸುತ್ತಿರುವ ಸಂದರ್ಭದಲ್ಲೇ ಈ ಎಚ್ಚರಿಕೆ ಗಂಭೀರವಾಗಿದೆ ಎಂದು ಕಂಪನಿ ಹೇಳಿದೆ.

ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತಾ, ಜೆಮಿನಿ ಅಥವಾ ಇತರೆ AI ಮೂಲಕ ಯಾವುದೇ ಸಂದರ್ಭದಲ್ಲೂ ಲಾಗಿನ್ ವಿವರಗಳನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. AI ಬಳಕೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಸರ್ಕಾರಗಳು, ಸಂಸ್ಥೆಗಳು ಹಾಗೂ ಸಾಮಾನ್ಯರು ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ