Saturday, October 25, 2025

ಆಂಧ್ರಪ್ರದೇಶಕ್ಕೆ ‘AI’ ಬೂಸ್ಟ್: VizaG‌ ಐತಿಹಾಸಿಕ ಹೂಡಿಕೆ ಸಂಭ್ರಮಿಸಿದ ಸಿಎಂ ನಾಯ್ಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಶಾಖಪಟ್ಟಣಂ (ವೈಜಾಗ್) ಅನ್ನು ಭಾರತದ ಕೃತಕ ಬುದ್ಧಿಮತ್ತೆ ರಾಜಧಾನಿಯನ್ನಾಗಿ ಮಾಡುವ ತಮ್ಮ ಕನಸಿಗೆ ದೊರೆತ ಬೃಹತ್ ಯಶಸ್ಸನ್ನು ಸಂಭ್ರಮಿಸಿದ್ದಾರೆ. ವೈಜಾಗ್‌ನಲ್ಲಿ AI ಡೇಟಾ ಹಬ್ ಸ್ಥಾಪಿಸಲು ಗೂಗಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ, ನಾಯ್ಡು ಅವರು ಸಾಮಾಜಿಕ ಜಾಲತಾಣದಲ್ಲಿ, “ವೈಜಾಗ್‌ನ ‘G’ ಈಗ @Google! #YoungestStateHighestInvestment” ಎಂಬ ಶೀರ್ಷಿಕೆಯೊಂದಿಗೆ ಬಂದರು ನಗರಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಟೆಕ್ ದೈತ್ಯ ಗೂಗಲ್ ಮುಂದಿನ ಐದು ವರ್ಷಗಳಲ್ಲಿ (2026–2030) ವೈಜಾಗ್‌ನಲ್ಲಿ ವಿಶ್ವ ದರ್ಜೆಯ AI ಚಾಲಿತ ಡೇಟಾ ಹಬ್ ಅನ್ನು ಸ್ಥಾಪಿಸಲು ಸುಮಾರು 1.33 ಲಕ್ಷ ಕೋಟಿ ಬೃಹತ್ ಹೂಡಿಕೆ ಮಾಡಲು ಸಿದ್ಧವಾಗಿದೆ. ಈ ಯೋಜನೆ, ಅಮೆರಿಕದ ಹೊರಗೆ ಗೂಗಲ್ ಮಾಡುತ್ತಿರುವ ಅತಿದೊಡ್ಡ ಹೂಡಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯೋಜನೆಯ ಪ್ರಮುಖ ಅಂಶಗಳು

ಭಾರತದ ಮೊದಲ ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್: ಈ ಡೇಟಾ ಹಬ್ ದೇಶದ ಮೊದಲ 1-ಗಿಗಾವ್ಯಾಟ್ ಪ್ರಮಾಣದ ಹೈಪರ್‌ಸ್ಕೇಲ್ ಡೇಟಾ ಸೆಂಟರ್ ಕ್ಯಾಂಪಸ್ ಆಗಿರಲಿದೆ.

ಅಂತರರಾಷ್ಟ್ರೀಯ ಸಂಪರ್ಕ ಕೇಂದ್ರ: ಇದು ಕೃತಕ ಬುದ್ಧಿಮತ್ತೆ ಮೂಲಸೌಕರ್ಯ, ದತ್ತಾಂಶ ಕೇಂದ್ರಗಳು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಹೊಸ ಸಬ್‌ಸೀ ಕೇಬಲ್ ಗೇಟ್‌ವೇಯನ್ನು ಸಂಯೋಜಿಸುತ್ತದೆ. ಇದು ವೈಜಾಗ್ ಅನ್ನು ಜಾಗತಿಕ ಸಂಪರ್ಕ ಕೇಂದ್ರವನ್ನಾಗಿ ಪರಿವರ್ತಿಸಲಿದೆ.

ಉದ್ಯೋಗ ಸೃಷ್ಟಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಎನ್. ರಾಮ್ ಮೋಹನ್ ನಾಯ್ಡು ಅವರು ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಈ ಐತಿಹಾಸಿಕ ಒಪ್ಪಂದವು ಆಂಧ್ರಪ್ರದೇಶದ ಆರ್ಥಿಕತೆಗೆ ಮತ್ತು ಯುವಜನತೆಗೆ ‘ಗೇಮ್ ಚೇಂಜರ್’ ಆಗಲಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!