ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಿನಿಂದ ನಾಡಿನತ್ತ ಬರುವ ಆನೆಗಳನ್ನು ವಾಪಾಸ್ ತನ್ನ ಮನೆಗೆ ಓಡಿಸೋದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಸಹಾಯ ಪಡೆಯಲಾಗಿದೆ. ಇದರಿಂದ ಬರುವ ವಿಚಿತ್ರ ವಿಭಿನ್ನ ಸದ್ದುಗಳನ್ನು ಕೇಳಿ ಆನೆ ಮುಂದೆ ಬರುವ ಬದಲು ವಾಪಾಸ್ ಹಿಂದಕ್ಕೆ ಹೆಜ್ಜೆ ಇಡುವಂತೆ ಮಾಡಲಾಗುತ್ತಿದೆ.
ಕಾಡಂಚಿನ ಪ್ರದೇಶಗಳ ರೈತರ ಜಮೀನುಗಳಲ್ಲಿನ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಣೆ ಮಾಡಲು ಅರಣ್ಯ ಇಲಾಖೆಯು ಕೃತಕ ಬುದ್ಧಿಮತ್ತೆ ಆಧಾರಿತ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದೆ.
ನಾಗರಹೊಳೆಯ ವೀರನಹೊಸಳ್ಳಿ ವಲಯ ವ್ಯಾಪ್ತಿಯ ಬೊಮ್ಮಲಾಪುರ ಹಾಡಿಯ ಗಡಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಈ ಕೂಗು ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇದನ್ನು ಫಾರ್ಮ್ ಗಾರ್ಡ್ (ತೋಟದ ಕಾವಲುಗಾರ) ಎಂದೂ ಕರೆಯಲಾಗುತ್ತಿದೆ. ಕ್ಯಾಮರಾದಲ್ಲಿ ಸದ್ಯಕ್ಕೆ ಕಾಡನ್ನು ದಾಟಿ ಹೊರಬರುವ ಆನೆಗಳನ್ನು ಮಾತ್ರ ಗುರುತಿಸಿ, ಕ್ರಿಯಾಶೀಲವಾಗುವಂತಹ ಪ್ರೋಗ್ರಾಂ ಮಾಡಿ ಅಳವಡಿಸಲಾಗಿದೆ.
ಕಾಡಿನಿಂದ ಊರುಗಳತ್ತ ಆಹಾರ ಅರಸಿಕೊಂಡು ಕಾಡಾನೆಗಳು ಬರುತ್ತವೆ ಎಂದು ಗುರುತಿಸಿರುವ ಮಾರ್ಗಗಳಲ್ಲಿ ಈ ಕೂಗು ಕ್ಯಾಮರಾ ಅಳವಡಿಸಲಾಗಿದೆ. ಆನೆಯು ಅರಣ್ಯದಿಂದ ಹೊರಬರುತ್ತಿರುವುದು ಕ್ಯಾಮರಾ ಕಣ್ಣಿಗೆ ಬಿದ್ದ ತಕ್ಷಣ, ಕ್ಯಾಮರಾದಲ್ಲಿ ಇರುವ ಧ್ವನಿವರ್ಧಕದ ಮೂಲಕ ಆನೆಯನ್ನು ವಿಚಲಿತಗೊಳಿಸುವ, ಭಯಬೀಳಿಸುವ ಸದ್ದುಗಳು ಜೋರಾಗಿ ಹೊರಬರುತ್ತವೆ.
ಪ್ರಾಕೃತಿಕವಾಗಿ ಆನೆಗೆ ಜೇನುನೋಣವೆಂದರೆ ತುಂಬಾ ಭಯ. ಹೀಗಾಗಿ, ಅನಾಮಿಕರು ಹತ್ತಿರ ಹೋದಾಗ ಜೇನುನೋಣಗಳ ಹಿಂಡು ಒಟ್ಟಾಗಿ ಎದುರಿಗೆ ಇರುವವರಿಗೆ ಭಯ ಹುಟ್ಟಿಸುವಂತೆ, ಗುಂಯ್ ಎಂದು ಸದ್ದು ಮಾಡುವ ರೀತಿಯಲ್ಲಿ ಕ್ಯಾಮರಾದಿಂದ ಕೂಗು ಕೇಳಿಸುತ್ತದೆ. ಇದಲ್ಲದೆ ಪಟಾಕಿ ಸಿಡಿಯುವ, ಜನರು ಜೋರಾಗಿ ಕಿರುಚಿಕೊಳ್ಳುವ ಸದ್ದು, ಗುಡುಗು, ಸಿಡಿಲು ಹೊಡೆದಂತೆ.. ಹೀಗೆ ಸುಮಾರು 20ಕ್ಕೂ ಹೆಚ್ಚು ಮಾದರಿಯಲ್ಲಿ ಕ್ಯಾಮರಾದಿಂದ ಶಬ್ಧಗಳು ಹೊರಬರುತ್ತದೆ. ಒಂದೊಂದು ಸಲ ಒಂದೊಂದು ನಮೂನೆಯಲ್ಲಿ ಕೂಗುತ್ತದೆ. ಇದರಿಂದ ಆನೆಯು ಈ ಹಾದಿಯಲ್ಲಿ ಬರಲು ಭಯಪಟ್ಟು, ವಾಪಸ್ ಕಾಡಿಗೆ ಪಯಣ ಬೆಳೆಸುತ್ತದೆ. ಜಮೀನುಗಳಲ್ಲಿ ಆನೆಗಳಿಂದ ಬೆಳೆಯೂ ನಾಶವಾಗುವುದು ತಪ್ಪುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

