ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆಯ (Artificial Intelligence) ದುರುಪಯೋಗ ದಿನೇದಿನೇ ಹೆಚ್ಚುತ್ತಿರುವ ಬಗ್ಗೆ ನಟಿ ಕೀರ್ತಿ ಸುರೇಶ್ ಧ್ವನಿ ಎತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐ-ಮಾರ್ಫಿಂಗ್ ತಮಗೆ ಭಾರಿ ಮಾನಸಿಕ ತೊಂದರೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಮುಖವನ್ನು ಅನಗತ್ಯ ಉಡುಪುಗಳು, ಅನುಚಿತ ಭಂಗಿಗಳು ಮತ್ತು ಬೇರೆಯದೇ ದೇಹದ ರೂಪದಲ್ಲಿ ಜೋಡಿಸಿ ಮಾಡಲಾಗುತ್ತಿರುವ ಬದಲಾಯಿತ ಚಿತ್ರಗಳು ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ ಎಂದು ಹೇಳಿದ್ದಾರೆ.
ಎಐ ಮೂಲಕ ಸೃಷ್ಟಿಸಲಾದ ಚಿತ್ರಗಳು ಅಷ್ಟು ಸಹಜವಾಗಿರುತ್ತವೆ; ಕೆಲವೊಮ್ಮೆ ತಮ್ಮದೇ ನಿಜವಾದ ಫೋಟೋನ, ಅಥವಾ ಕೃತಕವೋ ಎಂಬ ಗೊಂದಲ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಸಿನಿಮಾ ಮುಹೂರ್ತ ಪೂಜೆಯ ಫೋಟೋವನ್ನು ಎಡಿಟ್ ಮಾಡಲಾಗಿತ್ತು. ಸಮಾರಂಭಕ್ಕೆ ತಾನು ಧರಿಸಿದ್ದ ಉಡುಪನ್ನು ಸಂಪೂರ್ಣವಾಗಿ ಮಾರ್ಫ್ ಮಾಡಿ ಚಿತ್ರದಲ್ಲಿ ಬದಲಾಯಿಸಲಾಗಿತ್ತು. ದೇಹದ ಭಂಗಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು. “ನಾನು ನಿಜವಾಗಿಯೂ ಹಾಗೆ ಪೋಸ್ ಕೊಟ್ಟೇನೇ? ಎಂದು ನಾನು ಒಮ್ಮೆ ಶಾಕ್ ಆಗಿದ್ದೆ” ಎಂದು ಅವರು ಹೇಳಿದರು.
ಡೀಪ್‌ಫೇಕ್ ಮತ್ತು ಡಿಜಿಟಲ್ ಮ್ಯಾನಿಪ್ಯುಲೇಷನ್ ಭಾರತದಲ್ಲೂ ತೀವ್ರ ಗಂಭೀರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ, ಕೀರ್ತಿ ಕಟ್ಟುನಿಟ್ಟಿನ ಕಾನೂನು, ಡಿಜಿಟಲ್ ರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿಯ ಅಗತ್ಯವನ್ನು ಒತ್ತಿಹೇಳಿದರು. ತಂತ್ರಜ್ಞಾನ ಜನರ ಕೈಯಲ್ಲಿ ಇದ್ದರೂ, ಅದನ್ನು ಬಳಸುವ ರೀತಿ ಮೇಲೆ ನಿಯಂತ್ರಣ ಕಳೆದುಹೋಗುತ್ತಿರುವುದೇ ಆತಂಕಕಾರಿಯಾಗಿದೆ ಎಂದು ಅವರು ತಿಳಿಸಿದರು.

