Monday, December 22, 2025

ಏರ್ ಇಂಡಿಯಾದಿಂದ ಮುಂಬೈ, ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ನೇರ ವಿಮಾನ ಸೇವೆ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾ ಮಾರ್ಚ್ 1ರಿಂದ ಮುಂಬೈ ಮತ್ತು ಬೆಂಗಳೂರಿನಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗ ನೇರ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಿದೆ.

ಆದರೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ನಡೆಸುವ ಸೇವೆಯನ್ನು ಗಣನೀಯವಾಗಿ ವಿಸ್ತರಿಸಲಾಗಿದ್ದು, ವಾರಕ್ಕೆ ಇದ್ದ ಏಳು ವಿಮಾನಗಳಿಂದ ಹತ್ತು ವಿಮಾನಗಳಿಗೆ ಹೆಚ್ಚಿಸಲಾಗುತ್ತಿದೆ.

ಉತ್ತರ ಅಮೆರಿಕಾ ವೇಳಾಪಟ್ಟಿಯಲ್ಲಿ ಮಾಡಲಾದ ಈ ಬದಲಾವಣೆಗಳು, ಲಭ್ಯವಿರುವ ಸಾಮರ್ಥ್ಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಮುಂದುವರಿದಿರುವ ವಾಯು ಪ್ರದೇಶ ನಿರ್ಬಂಧಗಳಿಗೆ ಸಂಬಂಧಿಸಿದ ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಈ ಮೊದಲು ನವೆಂಬರ್ 22ರಂದು ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್, ವಾಯು ಪ್ರದೇಶ ನಿರ್ಬಂಧಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಅಮೆರಿಕಗೆ ಪ್ರಯಾಣದಬೇಡಿಕೆಯಲ್ಲಿ ಕಂಪನಿಗೆ ಕೆಲವು ಮಟ್ಟದ ಹೊಡೆತ ಬಿದ್ದಿದೆ ಎಂದು ಹೇಳಿದ್ದರು.

ಉತ್ತರ ಅಮೆರಿಕ ಏರ್ ಇಂಡಿಯಾಗೆ ಪ್ರಮುಖ ಅಂತಾರಾಷ್ಟ್ರೀಯ ವಿಭಾಗ. ಈ ವಿಮಾನ ಸಂಸ್ಥೆ ನ್ಯೂಯಾರ್ಕ್, ನ್ಯೂವಾರ್ಕ್, ಚಿಕಾಗೋ, ಸ್ಯಾನ್ ಫ್ರಾನ್ಸಿಸ್ಕೊ, ವ್ಯಾಂಕೂವರ್ ಮತ್ತು ಟೊರೊಂಟೊ ಸೇರಿದಂತೆ ಉತ್ತರ ಅಮೆರಿಕದ ಆರು ನಗರಗಳಿಗೆ ವಾರಕ್ಕೆ 51 ವಿಮಾನ ಸೇವೆಗಳನ್ನು ಒದಗಿಸುತ್ತಿದೆ. ಈ ಸೇವೆಗಳು ಬೋಯಿಂಗ್ 777 ಮತ್ತು ಏರ್‌ಬಸ್ A350 ವಿಮಾನಗಳ ಮೂಲಕ ಕಾರ್ಯಾಚರಿಸುತ್ತಿವೆ.

ಅಮೆರಿಕಗೆ ಪ್ರಯಾಣದ ಬೇಡಿಕೆ ಸಂಬಂಧಿತ ಪರಿಸ್ಥಿತಿಯು ತಾತ್ಕಾಲಿಕ ಎಂದು ವಿಲ್ಸನ್ ಹೇಳಿದ್ದಾರೆ. ನಾವು ಮಾರುಕಟ್ಟೆಯ ದೀರ್ಘಾವಧಿ ಭವಿಷ್ಯದ ಬಗ್ಗೆ ಇನ್ನೂ ತುಂಬಾ ವಿಶ್ವಾಸ ಹೊಂದಿದ್ದೇವೆ. ಈ ವಿಮಾನಗಳನ್ನು ನಿಯೋಜಿಸಲು ನಮಗೆ ಪರ್ಯಾಯ ಅವಕಾಶಗಳಿವೆ. ಆದ್ದರಿಂದ ನಾವು ಚುರುಕಾಗಿ ಮುಂದುವರಿಯುತ್ತೇವೆ ಎಂದು ಅವರು ಹೇಳಿದರು.

ಈಗಾಗಲೇ ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೊ ​​ಅಥವಾ ಮುಂಬೈ-ಸ್ಯಾನ್ ಫ್ರಾನ್ಸಿಸ್ಕೊ ​​ವಿಮಾನವನ್ನು ಬುಕ್ ಮಾಡಿರುವ ಪ್ರಯಾಣಿಕರಿಗೆ ಪರ್ಯಾಯ ಸೇವೆಗೆ ಅವಕಾಶ ಕಲ್ಪಿಸಲಾಗುವುದು ಅಥವಾ ಪೂರ್ಣ ಮರುಪಾವತಿಯನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

error: Content is protected !!