ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಇಂದೋರ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇತ್ತ ಪೈಲೆಟ್ ಏರ್ ಕಂಟ್ರೋಲ್ ರೂಂಗೆ ಮೇಡೇ ಸಂದೇಶ ನೀಡಿದ್ದಾರೆ. ಕೆಲ ಹೊತ್ತಿನ ಬಳಿಕ ಪೈಲೆಟ್ ಪ್ಯಾನ್ ಪ್ಯಾನ್ ಇಂಡಿಕೇಶನ್ ನೀಡಿ ವಿಮಾನವನ್ನು ಮತ್ತೆ ದೆಹಲಿಯಲ್ಲಿ ಲ್ಯಾಂಡ್ ಮಾಡಿದ ಘಟನೆ ನಡೆದಿದೆ.
ದೆಹಲಿ-ಇಂದೋರ್ ಏರ್ ಇಂಡಿಯಾ ವಿಮಾನ ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿ ತಕ್ಕ ಸಮಯಕ್ಕೆ ಪ್ರಯಾಣ ಆರಂಭಿಸಿತ್ತು. ರನ್‌ವೇಯಲ್ಲಿ ವೇಗವಾಗಿ ಸಾಗಿದ ಏರ್ ಇಂಡಿಯಾ ವಿಮಾನ, ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆಗಿ ವಿಮಾನ ಹಾರಾಟ ಆರಂಭಿಸದ ಬೆನ್ನಲ್ಲೇ ವಿಮಾನದ ಬಲಭಾಗದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಈ ವೇಳೆ ಪೈಲೆಟ್ ಮೇಡೇ ಕಾಲ್ ನೀಡಿದ್ದಾರೆ.ಮೇಡೇ ಕಾಲ್ ನೀಡಿದ ಬಳಿಕ ಪೈಲೆಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಲ ಭಾಗದ ಎಂಜಿನ್ ಆಫ್ ಮಾಡಿದ ಪೈಲೆಟ್, ಎಡ ಭಾಗದ ಎಂಜಿನ್ ಮೂಲಕ ವಿಮಾನ ನಿಯಂತ್ರಣಕ್ಕ ತೆಗೆದುಕೊಂಡಿದ್ದಾರೆ. ಇತ್ತ ಬಲಭಾಗ ಎಂಜಿನ್ ಆಫ್ ಮಾಡುತ್ತಿದ್ದಂತೆ ವಿಮಾನದ ಬೆಂಕಿ ನಿಧಾನವಾಗಿ ಕಡಿಮೆಯಾಗಿದೆ. ಹೀಗಾಗಿ ಮೇಡೇ ಸಂದೇಶವನ್ನು ಬಳಿ ಪ್ಯಾನ್ ಸಂದೇಶ ನೀಡಿದ್ದಾರೆ.
ಏರ್ ಇಂಡಿಯಾ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡಿದ ಏರ್ ಇಂಡಿಯಾ, ದೆಹಲಿ ಇಂದೋರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ ಎಂಜಿನ್ ಆಫ್ ಮಾಡಿ ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡ ಕಾರಣ ಮೇಡೇ ಸಂದೇಶವನ್ನು ಪ್ಯಾನ್ ಪ್ಯಾನ್ ಇಂಡಿಕೇಶನ್‌ಗೆ ಡೌನ್‌ಗ್ರೇಡ್ ಮಾಡಲಾಗಿತ್ತು. ಹೀಗಾಗಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿಲ್ಲ, ಬದಲಾಗಿ ಅರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಏನಿದು ಪ್ಯಾನ್ ಪ್ಯಾನ್ ಸಂದೇಶ
ಇತ್ತೀಚೆಗೆ ಅಹಮ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಿಂದ ಎಲ್ಲರಿಗೂ ಮೇಡೇ ಸಂದೇಶದ ಗಂಭೀರತೆ ಅರಿವಾಗಿತ್ತು. ವಿಮಾನ ನಿಯಂತ್ರಣಕ್ಕೆ ತೆಗೆದುಕೊಳ್ಳುವ, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಎಲ್ಲಾ ಅವಕಾಶಗಳು ಕ್ಷೀಣಿಸಿದಾಗ ಪೈಲೆಟ್ ಮೇಡೇ ಸಂದೇಶ ನೀಡುತ್ತಾರೆ. ಮೇಡೇ ಸಂದೇಶ ಬಂದರೆ ಏರ್ ಟ್ರಾಫಿಕ್ ಕಂಟ್ರೋಲ್ ರೂಂ ತುರ್ತುಗಿ ಈ ವಿಮಾನ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಪ್ಯಾನ್ ಪ್ಯಾನ್ ಸಂದೇಶ ಎಂದರೆ ಎಮರ್ಜೆನ್ಸಿ ಅಲ್ಲ. ಆ ಸಂದರ್ಭದಲ್ಲಿ ಕಾಣಿಸಿಕೊಂಡ ಅಪಾಯ, ಆದರೆ ಬಳಿಕ ಪೈಲೆಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೂ ಪ್ರಯಾಣ ಮುಂದುವರಿಸುವುದು ಅಪಾಯ ಎಂದಿದ್ದರೆ ಅಥವಾ ಲ್ಯಾಂಡಿಂಗ್ ಮಾಡಿ ವಿಮಾನ ಪರಿಶೀಲಿಸುವ ಅಗತ್ಯ ಕಂಡು ಬಂದರೆ ಪ್ಯಾನ್ ಪ್ಯಾನ್ ಸಂದೇಶ ನೀಡಲಾಗುತ್ತದೆ. ಪ್ಯಾನ್ ಪ್ಯಾನ್ ಸಂದೇಶ ಅರ್ಜೆನ್ಸಿ ಎಂದು ಪರಿಗಣಿಸಲಾಗುತ್ತದೆ, ಆದರೆ ಎಮರ್ಜೆನ್ಸಿ ಅಲ್ಲ.