Saturday, December 20, 2025

ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ: ಏರ್ ಇಂಡಿಯಾ ಪೈಲಟ್ ಅಮಾನತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಅತ್ಯಂತ ಬ್ಯುಸಿಯಾದ ವಿಮಾನ ನಿಲ್ದಾಣಗಳಲ್ಲಿ ಒಂದಾದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ಒಬ್ಬರು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ವಿಮಾನಯಾನ ಸಂಸ್ಥೆಯೂ ಸ್ಪಷ್ಟನೆ ನೀಡಿದೆ.

ಪ್ರಯಾಣಿಕ ಅಂಕಿತ್ ದಿವಾನ್ ಅವರು ನೀಡಿರುವ ದೂರಿನ ಪ್ರಕಾರ, ತಮ್ಮೊಂದಿಗೆ ನಾಲ್ಕು ತಿಂಗಳ ಮಗು ಇದ್ದ ಕಾರಣ ಸಿಬ್ಬಂದಿಗೆ ಮೀಸಲಾದ ಭದ್ರತಾ ತಪಾಸಣಾ ಮಾರ್ಗ ಬಳಸಲು ಅನುಮತಿ ಕೇಳಿದ್ದರು. ಈ ವೇಳೆ ಪೈಲಟ್ ಕ್ಯಾಪ್ಟನ್ ವೀರೇಂದ್ರ ಕೋಪಗೊಂಡು ಅವಾಚ್ಯ ಶಬ್ದಗಳನ್ನು ಬಳಸಿದ್ದು, ಮಾತಿನ ಚಕಮಕಿಯ ಬಳಿಕ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದಾಗಿ ತಮಗೆ ರಕ್ತಸ್ರಾವವಾಗಿದ್ದು, ಘಟನೆ ತಮ್ಮ ಏಳು ವರ್ಷದ ಮಗಳ ಎದುರಲ್ಲೇ ನಡೆದಿರುವುದು ಕುಟುಂಬಕ್ಕೆ ಮಾನಸಿಕ ಆಘಾತ ತಂದಿದೆ ಎಂದು ಅವರು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಷಾದ ವ್ಯಕ್ತಪಡಿಸಿದ್ದು, ಆರೋಪ ಎದುರಿಸುತ್ತಿರುವ ಪೈಲಟ್‌ನ್ನು ತಕ್ಷಣವೇ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಜೊತೆಗೆ ವಿಷಯದ ಕುರಿತು ಆಂತರಿಕ ತನಿಖೆ ಆರಂಭಿಸಿರುವುದಾಗಿ ಸಂಸ್ಥೆ ತಿಳಿಸಿದೆ.

error: Content is protected !!