Saturday, November 1, 2025

ಟಾಟಾ, ಸಿಂಗಾಪುರ ಏರ್‌ಲೈನ್ಸ್ ಬಳಿ 10,000 ಕೋಟಿ ನೆರವು ಕೇಳಿದ ಏರ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ಅಹಮ್ಮದಾಬಾದ್ ವಿಮಾನ ದುರಂತವು ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾಗೆ ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಈಗಾಗಲೇ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಮರಳಿ ತನ್ನ ತೆಕ್ಕೆಗೆ ಪಡೆದುಕೊಂಡು ಚೇತರಿಕೆ ದಾರಿಯಲ್ಲಿ ಸಾಗಿಸುತ್ತಿದ್ದಾಗಲೇ ಈ ದುರಂತ ಮತ್ತೊಂದು ಹೊಡೆತ ನೀಡಿದೆ. ಪರಿಣಾಮವಾಗಿ, ಏರ್ ಇಂಡಿಯಾ ಇದೀಗ ತನ್ನ ಮಾತೃಸಂಸ್ಥೆಯಾದ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‌ಲೈನ್ಸ್ ಬಳಿ 10,000 ಕೋಟಿ ರೂಪಾಯಿ ಆರ್ಥಿಕ ನೆರವಿಗೆ ಮನವಿ ಮಾಡಿದೆ.

ಆರ್ಥಿಕ ನೆರವಿನ ಅಗತ್ಯ ಏಕೆ?
ಅಹಮ್ಮದಾಬಾದ್ ದುರಂತದಿಂದಾಗಿ ವಿಮಾನಗಳ ಹಾನಿ, ಸುರಕ್ಷತಾ ವ್ಯವಸ್ಥೆಯ ನವೀಕರಣ ಹಾಗೂ ತಾಂತ್ರಿಕ ಸುಧಾರಣೆ ಅಗತ್ಯವಿರುವುದರಿಂದ ಏರ್ ಇಂಡಿಯಾ ತೀವ್ರ ನಷ್ಟ ಅನುಭವಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ಸುರಕ್ಷತಾ ನಿಯಮಾವಳಿಗಳನ್ನು ಜಾರಿಗೊಳಿಸಿರುವುದರಿಂದ ಪ್ರತಿ ವಿಮಾನದಲ್ಲಿ ಸಿಸ್ಟಮ್ ಅಪ್‌ಗ್ರೇಡ್, ನಿರ್ವಹಣೆ ಮತ್ತು ಸುರಕ್ಷತಾ ಫೀಚರ್ಸ್‌ಗಾಗಿ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಈ ಕಾರಣಕ್ಕೆ ಸಂಸ್ಥೆಯು ಬಡ್ಡಿರಹಿತ ಸಾಲದ ರೂಪದಲ್ಲಿ ನೆರವು ನೀಡುವಂತೆ ಟಾಟಾ ಸನ್ಸ್ (74.9%) ಮತ್ತು ಸಿಂಗಾಪುರ ಏರ್‌ಲೈನ್ಸ್ (25.1%) ಪಾಲುದಾರರಿಗೆ ಮನವಿ ಮಾಡಿದೆ.

ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಹಲವು ಸಂಸ್ಥೆಗಳು ನಷ್ಟದ ಹೊಣೆಯಿಂದ ಬಾಗಿಲು ಮುಚ್ಚಿವೆ. ಪ್ರಸ್ತುತ ಇಂಡಿಗೋ ಏರ್‌ಲೈನ್ಸ್ ಮಾತ್ರ ಶೇಕಡಾ 64ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿ ಲಾಭದಲ್ಲಿದೆ. ಇತರ ಸಂಸ್ಥೆಗಳು, ಅದರಲ್ಲೂ ಏರ್ ಇಂಡಿಯಾ, ಇಂಧನ ದರ, ನಿರ್ವಹಣಾ ವೆಚ್ಚ ಹಾಗೂ ಕಡಿಮೆ ಟಿಕೆಟ್ ದರದ ಒತ್ತಡದಿಂದ ನಷ್ಟ ಅನುಭವಿಸುತ್ತಿವೆ.

ಏರ್ ಇಂಡಿಯಾವನ್ನು ಆರಂಭಿಸಿದ್ದು ಟಾಟಾ ಗ್ರೂಪ್‌ವೇ. ಆದರೆ ಸ್ವಾತಂತ್ರ್ಯ ನಂತರ ಸರ್ಕಾರದ ವ್ಯಾಪ್ತಿಗೆ ಒಳಗಾದ ಬಳಿಕ ಸಂಸ್ಥೆ ನಿರಂತರ ನಷ್ಟದಲ್ಲಿಯೇ ಮುಂದುವರಿಯಿತು. ಟಾಟಾ ಗ್ರೂಪ್ 2022ರಲ್ಲಿ ಏರ್ ಇಂಡಿಯಾಗೆ ಹೊಸ ಜೀವ ತುಂಬಲು ಮುಂದಾದರೂ, ಇತ್ತೀಚಿನ ದುರಂತವು ಮತ್ತೆ ಸಂಸ್ಥೆಯ ಆರ್ಥಿಕ ಸ್ಥಿತಿಗೆ ಕಲ್ಲು ತೂರಿದೆ.

error: Content is protected !!