Thursday, December 18, 2025

ದೆಹಲಿಯಲ್ಲಿ ವಾಯುಮಾಲಿನ್ಯ ತಾಂಡವ: ವರ್ಕ್ ಫ್ರಂ ಹೋಮ್ ಜಾರಿ, ಕಾರ್ಮಿಕರಿಗೆ ಆರ್ಥಿಕ ನೆರವು

ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯದ ಮಟ್ಟವು ಅಪಾಯಕಾರಿ ಹಂತವನ್ನು ಮೀರಿ Severe Plus ವಲಯಕ್ಕೆ ತಲುಪಿದೆ. ಡಿಸೆಂಬರ್ 15ರಂದು ಈ ಋತುವಿನಲ್ಲೇ ಅತ್ಯಂತ ಕಳಪೆ ವಾಯು ಗುಣಮಟ್ಟ ದಾಖಲಾದ ಬೆನ್ನಲ್ಲೇ, ದೆಹಲಿ ಸರ್ಕಾರವು ಜನಜೀವನ ರಕ್ಷಿಸಲು ಕಠಿಣ ನಿರ್ಬಂಧಗಳನ್ನು ಹೇರಿದೆ.

ಸರ್ಕಾರದ ಪ್ರಮುಖ ಕ್ರಮಗಳು:

ಮಾಲಿನ್ಯದ ತೀವ್ರತೆ ತಗ್ಗಿಸಲು ಮತ್ತು ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಮಾಡಲು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಶೇ. 50ರಷ್ಟು ನೌಕರರಿಗೆ ‘ಮನೆಯಿಂದಲೇ ಕೆಲಸ’ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಪರಿಸ್ಥಿತಿ ನಿಯಂತ್ರಿಸಲು ವಾಯುಮಾಲಿನ್ಯ ನಿರ್ವಹಣಾ ಆಯೋಗವು ಅತ್ಯಂತ ಕಠಿಣವಾದ ‘ಗ್ರಾಪ್ 5’ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕಟ್ಟಡ ಕಾಮಗಾರಿಗಳ ನಿಷೇಧದಿಂದಾಗಿ ಸಾವಿರಾರು ದಿನಗೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಸ್ಪಂದಿಸಿರುವ ಸರ್ಕಾರ, ರಾಜ್ಯದ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ 10,000 ರೂಪಾಯಿಗಳ ಆರ್ಥಿಕ ಪರಿಹಾರ ನೀಡುವುದಾಗಿ ಘೋಷಿಸಿದೆ.

ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಕಾಮಗಾರಿ ಮುಂದುವರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಭಾರಿ ಮೊತ್ತದ ದಂಡ ವಿಧಿಸಲಾಗುವುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದೆಹಲಿ ಸರ್ಕಾರ ಎಚ್ಚರಿಸಿದೆ.

error: Content is protected !!