ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಟಿ ಹಬ್ ಬೆಂಗಳೂರು ಈಗ ‘ವಾಯು ಮಾಲಿನ್ಯದ ಹಾಟ್‌ಸ್ಪಾಟ್’ ಆಗಿ ಮಾರ್ಪಡುತ್ತಿದೆ. ಕಳೆದ ಕೆಲವು ದಿನಗಳಿಂದ ನಗರದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ನಿನ್ನೆ (ಡಿ. 12) 175ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕ ಇಂದು 186 ರಿಂದ 206ರವರೆಗೂ ಏರಿಕೆ ಕಂಡಿದೆ. ಈ ಪರಿಸ್ಥಿತಿ ಮುಂದುವರೆದರೆ, ಭವಿಷ್ಯದಲ್ಲಿ ರಾಜಧಾನಿ ದೆಹಲಿಯಂತೆಯೇ ಬೆಂಗಳೂರಿನಲ್ಲಿಯೂ ಉಸಿರಾಟಕ್ಕೆ ತೀವ್ರ ಬಿಕ್ಕಟ್ಟು ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೇವಲ AQI ಮಾತ್ರವಲ್ಲ, ಗಾಳಿಯಲ್ಲಿರುವ ವಿಷಕಾರಿ ಸೂಕ್ಷ್ಮ ಕಣಗಳ ಪ್ರಮಾಣವೂ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಇಂದು ನಗರದಲ್ಲಿ PM2.5 ಪ್ರಮಾಣ 95 ಮೈಕ್ರೋಗ್ರಾಮ್ ಮತ್ತು PM10 ಪ್ರಮಾಣ 96 ಮೈಕ್ರೋಗ್ರಾಮ್ ಇದೆ.
ಭಾರತೀಯ ಸುರಕ್ಷಾ ಮಾನದಂಡಗಳ ಪ್ರಕಾರ, PM2.5 ಪ್ರಮಾಣ 40ಕ್ಕಿಂತ ಕಡಿಮೆ ಮತ್ತು PM10 ಪ್ರಮಾಣ 50 ಮೈಕ್ರೋಗ್ರಾಮ್‌ಗಿಂತ ಕಡಿಮೆ ಇರಬೇಕು.
PM2.5 ಕಣಗಳು ಸಾಮಾನ್ಯವಾಗಿ ವಾಹನಗಳ ಹೊಗೆ, ಕೈಗಾರಿಕಾ ಹೊಗೆ ಮತ್ತು ಇಂಧನಗಳ ದಹನದಿಂದ ಉತ್ಪತ್ತಿಯಾಗುತ್ತವೆ. ಆದರೆ, PM10 ಕಣಗಳು ನಿರ್ಮಾಣ ಕಾರ್ಯಗಳ ಧೂಳು ಮತ್ತು ಪರಾಗದಿಂದ ಹೆಚ್ಚಾಗಿ ಹೊರಹೊಮ್ಮುತ್ತವೆ. ಈ ಎರಡೂ ಕಣಗಳು ಮಿತಿ ಮೀರಿದಾಗ ಸಾರ್ವಜನಿಕರಲ್ಲಿ ಆಸ್ತಮಾದಂತಹ ಗಂಭೀರ ಉಸಿರಾಟದ ಸಮಸ್ಯೆಗಳು ಎದುರಾಗುತ್ತವೆ.
ಈ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಗಳು ಮತ್ತು ಭಾರತದ ಮಾನದಂಡಗಳ ನಡುವೆ ಭಾರೀ ವ್ಯತ್ಯಾಸವಿದೆ. 5ಕ್ಕಿಂತ ಹೆಚ್ಚಿನ PM2.5 ಪ್ರಮಾಣವಿದ್ದರೂ ಜನರಲ್ಲಿ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು.
ಈ ಹಿನ್ನೆಲೆಯಲ್ಲಿ, ಪ್ರಸ್ತುತ ಬೆಂಗಳೂರಿನ AQI 200 ದಾಟಿರುವುದರಿಂದ, ಈಗಾಗಲೇ ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ತೀವ್ರ ಜಾಗರೂಕರಾಗಿರಬೇಕಿದೆ.
PM ಕಣಗಳು ಮಾತ್ರವಲ್ಲದೆ, ಇಂಗಾಲದ ಮಾನಾಕ್ಸೈಡ್, ಓಝೋನ್ ಮತ್ತು ನೈಟ್ರೋಜನ್ ಡೈ ಆಕ್ಸೈಡ್‌ಗಳ ಹೆಚ್ಚಳವೂ ಗಾಳಿಯನ್ನು ಉಸಿರಾಡಲು ಅನರ್ಹವನ್ನಾಗಿಸುತ್ತಿವೆ. ಸದ್ಯಕ್ಕೆ ಬೆಂಗಳೂರು ನಗರ ಮಾತ್ರವಲ್ಲದೆ, ಅರೇಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುತ್ತಿದೆ.

