Monday, November 3, 2025

ದೆಹಲಿಯಲ್ಲಿ ಅತಂತ್ಯ ಕಳಪೆಗಿಳಿದ ವಾಯು ಗುಣಮಟ್ಟ: ಮೋಡ ಬಿತ್ತನೆಗೆ ಮುಂದಾದ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದೆ. ವಾಯು ಗುಣಮಟ್ಟ ಅತಂತ್ಯ ಕಳಪೆಗಿಳಿದಿದ್ದು, ಇತ್ತ ಹವಾಮಾನವನ್ನು ಹತೋಟಿಗೆ ತರಲು ದೆಹಲಿಯ ಕೆಲವು ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದೆ.

ವಾರ್ಷಿಕ ವಿಷಕಾರಿ ಹೊಗೆಯ ಹೊದಿಕೆಯಿಂದ ಉಸಿರುಗಟ್ಟಿಸುತ್ತಿರುವ ರಾಷ್ಟ್ರ ರಾಜಧಾನಿ, ಮಳೆಗಾಗಿ ಕಾಯುತ್ತಿದೆ. ಮಳೆಯಾದರೆ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆಯಾಗಬಹುದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೊದಲ ಮೋಡ ಬಿತ್ತನೆ ವಿಫಲವಾದರೆ, ಎರಡನೇ ಬಾರಿಗೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

2024-25ರ ಚಳಿಗಾಲದಲ್ಲಿ ದೆಹಲಿಯು ಭಾರತದ ಅತ್ಯಂತ ಕಲುಷಿತ ಮೆಗಾಸಿಟಿಯಾಗಿ ಉಳಿಯಿತು, ಪ್ರತಿ ಘನ ಮೀಟರ್‌ಗೆ ಸರಾಸರಿ PM2.5 ಸಾಂದ್ರತೆಯು 175 ಮೈಕ್ರೋಗ್ರಾಂಗಳಷ್ಟು ಇತ್ತು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ವಿಶ್ಲೇಷಣೆ ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ದೆಹಲಿಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ವಾಯು ಗುಣಮಟ್ಟ ಸೂಚ್ಯಂಕ 306 ರಷ್ಟಿದ್ದು, ಇದನ್ನು ‘ತುಂಬಾ ಕಳಪೆ’ ವರ್ಗ ಎಂದು ವರ್ಗೀಕರಿಸಲಾಗಿದೆ.

ವಾಯುವ್ಯ ದೆಹಲಿಯಲ್ಲಿ ಐದು ಮೋಡ ಬಿತ್ತನೆ ಪ್ರಯೋಗಗಳನ್ನು ಕೈಗೊಳ್ಳಲು ದೆಹಲಿ ಸರ್ಕಾರ ಸೆಪ್ಟೆಂಬರ್ 25 ರಂದು ಐಐಟಿ ಕಾನ್ಪುರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತ್ತು. ಅಕ್ಟೋಬರ್ 1 ರಿಂದ ನವೆಂಬರ್ 30 ರ ನಡುವೆ ಯಾವುದೇ ಸಮಯದಲ್ಲಿ ಪ್ರಯೋಗಗಳನ್ನು ನಡೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಹಿಂದೆ ಐಐಟಿ ಕಾನ್ಪುರಕ್ಕೆ ಅನುಮತಿ ನೀಡಿತ್ತು. ಮೇ 7 ರಂದು ದೆಹಲಿ ಸಚಿವ ಸಂಪುಟವು ಒಟ್ಟು 3.21 ಕೋಟಿ ರೂ. ವೆಚ್ಚದಲ್ಲಿ ಐದು ಮೋಡ ಬಿತ್ತನೆ ಪ್ರಯೋಗಗಳನ್ನು ನಡೆಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು.

error: Content is protected !!