Saturday, December 13, 2025

ಏರ್‌ಗನ್ ಫೈರಿಂಗ್: ಗುರಿ ತಪ್ಪಿ ಉದ್ಯಮಿಗೆ ಗುಂಡೇಟು! ಕಾನೂನು ವಿದ್ಯಾರ್ಥಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಸವನಗುಡಿ ಪ್ರದೇಶದಲ್ಲಿ ಉದ್ಯಮಿಯೊಬ್ಬರ ಮೇಲೆ ಏರ್‌ಗನ್‌ನಿಂದ ಫೈರಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ಘಟನೆಯ ಹಿಂದಿನ ರಹಸ್ಯವನ್ನು ಭೇದಿಸಿದ್ದಾರೆ. ಅಫ್ಜಲ್ ಎಂಬಾತ ಬಂಧಿತ ಆರೋಪಿ.

ಘಟನೆ ವಿವರ:

ಡಿಸೆಂಬರ್ 10ರ ರಾತ್ರಿ 8:30ರ ಸುಮಾರಿಗೆ ನರ್ತಕಿ ಹಾಗೂ ಕಾರ್ಗಿಲ್ ಬಾರ್ ಮಾಲೀಕರೂ ಆಗಿರುವ ರಾಜಗೋಪಾಲ್ ಅವರ ಮೇಲೆ ಫೈರಿಂಗ್ ನಡೆದಿತ್ತು. ಸ್ನೇಹಿತರನ್ನು ಭೇಟಿಯಾಗಲು ಪಾರ್ಕ್‌ಗೆ ಬಂದಿದ್ದ ರಾಜಗೋಪಾಲ್ ಅವರಿಗೆ ವಾಕಿಂಗ್ ಮಾಡುತ್ತಿದ್ದಾಗ ಗುಂಡೇಟು ತಗುಲಿ ಕತ್ತಿನ ಭಾಗಕ್ಕೆ ಗಾಯವಾಗಿತ್ತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ತನಿಖೆಗಿಳಿದ ಬಸವನಗುಡಿ ಪೊಲೀಸರು, ರಾಜಗೋಪಾಲ್ ಅವರಿಗೆ ಯಾವುದೇ ಬೆದರಿಕೆ ಇಲ್ಲದ ಕಾರಣ ಹತ್ಯೆ ಸಂಚು ಅಥವಾ ಟಾರ್ಗೆಟ್ ಫೈರಿಂಗ್‌ನಂತಹ ಸಾಧ್ಯತೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಆದರೆ, ಯಾವುದೇ ಖಚಿತ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಬುಲೆಟ್ ಎಲ್ಲಿಂದ ಹಾರಿಬಂದಿದೆ ಎಂಬ ಜಾಡು ಹಿಡಿದು ತನಿಖೆ ಮುಂದುವರೆಸಿದರು.

ಈ ಸಂದರ್ಭದಲ್ಲಿ, ಹೊರಗಿನಿಂದ ಗುಂಡು ಬಂದಿರಬಹುದು ಎಂಬ ಅನುಮಾನದ ಮೇರೆಗೆ ಪೊಲೀಸರು ಸುತ್ತಮುತ್ತಲಿನ ಫ್ಲ್ಯಾಟ್‌ಗಳ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ, ಅಫ್ಜಲ್‌ನ ಫ್ಲ್ಯಾಟ್‌ನಿಂದ ಫೈರಿಂಗ್ ಆಗಿರುವುದು ದೃಢಪಟ್ಟಿದೆ.

ಪೊಲೀಸರು ಅಫ್ಜಲ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಕಾನೂನು ಪದವಿ ಓದುತ್ತಿರುವ ಅಫ್ಜಲ್, ತಾನು ಮನೆಯಲ್ಲಿ ಏರ್‌ಗನ್‌ನಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದೆ ಎಂದು ಹೇಳಿದ್ದಾನೆ. “ಅಭ್ಯಾಸ ಮಾಡುವಾಗ ಗುರಿ ತಪ್ಪಿ ಏರ್‌ಗನ್ ಬುಲೆಟ್ ಕಿಟಕಿಯಿಂದ ಹೊರಗೆ ಹೋಗಿದೆ” ಎಂದು ಅಫ್ಜಲ್ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.

ಸದ್ಯ ಪೊಲೀಸರು ಅಫ್ಜಲ್‌ನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಸಂಚು ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಶಂಕಿಸಲಾಗಿದ್ದ ಈ ಪ್ರಕರಣವು, ಗುರಿ ತಪ್ಪಿದ ಅಭ್ಯಾಸದ ಪ್ರಮಾದ ಎಂದು ದೃಢಪಟ್ಟಿದೆ.

error: Content is protected !!