Saturday, January 10, 2026

ಹೆಣ್ಣುಮಕ್ಕಳ ರಕ್ಷಣೆಗೆ ಬಂತು ‘ಅಕ್ಕ ಪಡೆ’: ಕೋಟೆ ನಾಡಿನಲ್ಲಿ ಮಹಿಳಾ ಪೊಲೀಸ್ ಗಸ್ತು ಆರಂಭ

ಹೊಸದಿಗಂತ ಚಿತ್ರದುರ್ಗ:

ಕೋಟೆ ನಾಡಿನ ಮಹಿಳೆಯರು ಮತ್ತು ಹೆಣ್ಣುಮಕ್ಕಳ ರಕ್ಷಣೆಗೆ ಈಗ ಹೊಸದೊಂದು ಬಲ ಬಂದಿದೆ. ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ತಕ್ಷಣ ಧಾವಿಸುವ ‘ಅಕ್ಕ ಪಡೆ’ಯ ವಿಶೇಷ ಪೊಲೀಸ್ ಗಸ್ತು ವಾಹನಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಚಾಲನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ವಾಹನವನ್ನು ಸಜ್ಜುಗೊಳಿಸಲಾಗಿದ್ದು, ಜಿಲ್ಲೆಯ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ.

ಯಾವುದೇ ಮಹಿಳೆ ಅಥವಾ ಮಗು ಕಿರುಕುಳ, ಕೌಟುಂಬಿಕ ಹಿಂಸೆ, ಈವ್ ಟೀಸಿಂಗ್ ಅಥವಾ ಮಾದಕ ದ್ರವ್ಯ ಜಾಲಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದರೆ ಕೆಳಗಿನ ಸಹಾಯವಾಣಿಗಳಿಗೆ ಕರೆ ಮಾಡಬಹುದು:

ಪೊಲೀಸ್ ತುರ್ತು ಸೇವೆ: 112

ಮಕ್ಕಳ ಸಹಾಯವಾಣಿ: 1098

ಈ ಸಂಖ್ಯೆಗಳಿಗೆ ಕರೆ ಮಾಡಿದ ತಕ್ಷಣವೇ ಅಕ್ಕ ಪಡೆಯ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣೆ ನೀಡಲಿದೆ.

ಈ ವಿಶೇಷ ಪಡೆಯು ನಗರದ ಬಸ್ ನಿಲ್ದಾಣಗಳು, ಕಾಲೇಜುಗಳು, ಶಾಲೆಗಳು, ಉದ್ಯಾನವನಗಳು, ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಿರಂತರವಾಗಿ ಕಣ್ಗಾವಲು ಇಡಲಿದೆ. ಈ ಪಡೆಯ ತಂಡದಲ್ಲಿ ಮಹಿಳಾ ಪೊಲೀಸರು ಮತ್ತು ಮಹಿಳಾ ಗೃಹ ರಕ್ಷಕರು ಇರುವುದು ವಿಶೇಷ.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್, ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವುದು ಹಾಗೂ ಅಪರಾಧ ಮುಕ್ತ ವಾತಾವರಣ ನಿರ್ಮಿಸುವುದು ಈ ಯೋಜನೆಯ ಗುರಿಯಾಗಿದೆ.

error: Content is protected !!