ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟವು ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿ ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಮೆಗಾ ಡೈರಿ ಸ್ಥಾಪನೆ ಹಾಗೂ 10 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾದೇಶಿಕ ಸಹಕಾರ ಭವನ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಇದರೊಂದಿಗೆ, ಕಲಬುರಗಿ ನಗರದ ಸೌಂದರ್ಯೀಕರಣ ಮತ್ತು ಇತಿಹಾಸ ಸ್ಮರಣೆಗಾಗಿ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಪುತ್ಥಳಿಗಳನ್ನು ಸ್ಥಾಪಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಸುರಕ್ಷತೆಯನ್ನು ಬಲಪಡಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ 31 ಜಿಲ್ಲೆಗಳು ಮತ್ತು 5 ಪೊಲೀಸ್ ಆಯುಕ್ತಾಲಯ ವ್ಯಾಪ್ತಿಗಳಲ್ಲಿ ‘ಅಕ್ಕ ಪಡೆ’ ಯೋಜನೆಯನ್ನು ಜಾರಿಗೊಳಿಸಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇದು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಬಲ ನೀಡಲಿದೆ.
ವಿವಿಧ ಕಾರಾಗೃಹಗಳಲ್ಲಿ ಉತ್ತಮ ನಡತೆ ತೋರಿದ 33 ಜೀವಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಇವರಲ್ಲಿ ಆರ್ಮ್ಸ್ ಆಕ್ಟ್‌ಗೆ ಸಂಬಂಧಿಸಿದ ಇಬ್ಬರು ಬಂಧಿಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ. ಇನ್ನುಳಿದಂತೆ, ಪಕ್ಷದ ಸಂಘಟನೆಗೆ ಪೂರಕವಾಗಿ ಶಿರಾ ತಾಲೂಕಿನಲ್ಲಿ ಏಳೂವರೆ ಗುಂಟೆ ಹಾಗೂ ಸಿರವಾರ ತಾಲೂಕಿನಲ್ಲಿ 10 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಸಂಪುಟ ಸಮ್ಮತಿಸಿದೆ.

