ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಮೂರು ಎಕರೆ ಜಮೀನಿಗಾಗಿ ಜನ್ಮ ನೀಡಿದ ತಾಯಿಯನ್ನೇ ಮಗನೊಬ್ಬ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಲಿಂಗಸೂಗೂರು ತಾಲೂಕಿನ ಜಕ್ಕೇರುಮಡು ತಾಂಡಾದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕುಮಾರ ಎಂಬಾತ ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದ. ಕುಮಾರನಿಗೆ ತನ್ನ ತಾಯಿ ಚಂದವ್ವ (55) ಹೆಸರಿನಲ್ಲಿದ್ದ ಪಿತ್ರಾರ್ಜಿತ ಆಸ್ತಿಯ ಮೇಲೆ ಕಣ್ಣಿತ್ತು. ತನಗೂ ಮತ್ತು ತನ್ನ ಅಣ್ಣನಿಗೂ ಈ ಕೂಡಲೇ ಮೂರು ಎಕರೆ ಜಮೀನನ್ನು ಪಾಲು ಮಾಡಿಕೊಡಬೇಕು ಎಂದು ಆತ ತಾಯಿಯೊಂದಿಗೆ ನಿರಂತರವಾಗಿ ಜಗಳ ತೆಗೆಯುತ್ತಿದ್ದ. ಆದರೆ, ಆಸ್ತಿ ಭಾಗ ಮಾಡಲು ತಾಯಿ ನಿರಾಕರಿಸುತ್ತಾ ಬಂದಿದ್ದರು.
ಘಟನೆಯ ದಿನ ಪೂರ್ಣವಾಗಿ ಮದ್ಯ ಸೇವಿಸಿದ್ದ ಕುಮಾರ, ಮತ್ತೆ ಅದೇ ವಿಚಾರವಾಗಿ ತಾಯಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಗಲಾಟೆ ವಿಕೋಪಕ್ಕೆ ಹೋದಾಗ, ಮದ್ಯದ ನಶೆಯಲ್ಲಿದ್ದ ಆತ ಅಮಾನವೀಯವಾಗಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರುವಂತೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಕುಮಾರನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.



