January21, 2026
Wednesday, January 21, 2026
spot_img

ದರ್ಶನ್, ಪವಿತ್ರಾ ಸೇರಿ ಎಲ್ಲ ಆರೋಪಿಗಳಿಂದ ‘ಆರೋಪ ನಿರಾಕರಣೆ’: ನ.10ಕ್ಕೆ ಸಾಕ್ಷ್ಯಗಳ ವಿಚಾರಣೆ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದ ದೋಷಾರೋಪಣೆ ನಿಗದಿ ಪ್ರಕ್ರಿಯೆ ಇಂದು ಬೆಂಗಳೂರಿನ 64ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ನಡೆಯಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಪ್ರಕರಣದ ಪ್ರಮುಖ ಅಂಶಗಳಾದ ಕೊಲೆ, ಅಪಹರಣ, ಸಾಕ್ಷಿನಾಶ, ಅಕ್ರಮ ಕೂಟ ಮತ್ತು ಕ್ರಿಮಿನಲ್ ಒಳಸಂಚು ಸೇರಿದಂತೆ ಎಲ್ಲ ಆರೋಪಿಗಳ ಮೇಲಿನ ದೋಷಾರೋಪಗಳನ್ನು ಬೆಂಚ್ ಕ್ಲರ್ಕ್ ನ್ಯಾಯಾಧೀಶರ ಸಮ್ಮುಖದಲ್ಲಿ ಓದಿ ಹೇಳಿದರು. ಈ ವೇಳೆ, ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಪೂರ್ತಿಯಾಗಿ ನಿರಾಕರಿಸಿದ್ದಾರೆ.

ಆರೋಪಗಳನ್ನು ಒಪ್ಪಿಕೊಂಡಿದ್ದರೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇತ್ತು. ಆರೋಪಿಗಳು ಆರೋಪಗಳನ್ನು ಒಪ್ಪದ ಕಾರಣ, ನ್ಯಾಯಾಲಯವು ಮುಂದಿನ ಹಂತವಾಗಿ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ನವೆಂಬರ್ 10 ರಂದು ಸಾಕ್ಷ್ಯಗಳ ವಿಚಾರಣೆ ಆರಂಭವಾಗಲಿದೆ.

ಕೋರ್ಟ್ ಹಾಲ್‌ನಲ್ಲಿ ಗದ್ದಲ – ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ

ಇದು ಬಹುನಿರೀಕ್ಷಿತ ಮತ್ತು ಹೈಪ್ರೊಫೈಲ್ ಪ್ರಕರಣವಾದ ಕಾರಣ, ದೋಷಾರೋಪಣೆ ಪ್ರಕ್ರಿಯೆ ವೀಕ್ಷಿಸಲು ಕೋರ್ಟ್ ಹಾಲ್‌ನಲ್ಲಿ ಅಸಂಖ್ಯಾತ ವಕೀಲರು ಮತ್ತು ಸಾರ್ವಜನಿಕರು ಕಿಕ್ಕಿರಿದು ತುಂಬಿದ್ದರು.

ನ್ಯಾಯಾಲಯದ ಜನದಟ್ಟಣೆ ಮತ್ತು ಗದ್ದಲವನ್ನು ಗಮನಿಸಿದ ನ್ಯಾಯಾಧೀಶರು, ಮೊದಲು ನಗೆ ಚೆಲ್ಲಿ, ನಂತರ ಗಂಭೀರವಾಗಿ, ಪ್ರಕರಣಕ್ಕೆ ಸಂಬಂಧಪಡದ ಎಲ್ಲರೂ ಹೊರಗೆ ಹೋಗುವಂತೆ ಸೂಚಿಸಿದರು. ಆದರೆ ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ, ಅಂತಿಮವಾಗಿ ನ್ಯಾಯಾಧೀಶರು ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ನಿರ್ಧರಿಸಿದರು. ಜನರನ್ನು ಹೊರಕಳುಹಿಸಿ, ಜನದಟ್ಟಣೆಯನ್ನು ತೆರವುಗೊಳಿಸಿದ ನಂತರವೇ ದೋಷಾರೋಪಣೆ ನಿಗದಿ ಪ್ರಕ್ರಿಯೆ ಆರಂಭವಾಯಿತು.

ಬೆಂಚ್ ಕ್ಲರ್ಕ್ ಒಬ್ಬೊಬ್ಬ ಆರೋಪಿಯ ಹೆಸರನ್ನು ಕೂಗಿ, ನ್ಯಾಯಾಧೀಶರ ಸಮ್ಮುಖದಲ್ಲಿ ನಿಲ್ಲಿಸಿ, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳಿಗೆ ನ್ಯಾಯಾಧೀಶರು ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ನಂತರ ದೋಷಾರೋಪಣೆ ಪ್ರಕ್ರಿಯೆ ಪೂರ್ಣಗೊಂಡಿತು.

Must Read