April 13, 2026
Monday, April 13, 2026
spot_img

ಸ್ಪಷ್ಟತೆ ಇತ್ತು, ಗೆಲುವು ನಮ್ಮದಾಯಿತು: ನಾಯಕ ರಜತ್ ಪಾಟಿದಾರ್ ‘ವಿಜಯ ಮಂತ್ರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ನ 20ನೇ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್​ಗಳ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ, ಅಬ್ಬರದ ಬ್ಯಾಟಿಂಗ್ ನೆರವಿನಿಂದ ದಾಖಲೆಯ 240 ರನ್ ಕಲೆಹಾಕಿತು.

ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ (50) ಮತ್ತು ಫಿಲ್ ಸಾಲ್ಟ್ (78) ಸ್ಫೋಟಕ ಆರಂಭ ನೀಡಿದರು. ನಂತರ ಬಂದ ನಾಯಕ ರಜತ್ ಪಾಟಿದಾರ್ 53 ರನ್ ಸಿಡಿಸಿ ತಂಡದ ಮೊತ್ತವನ್ನು ಬೃಹತ್ ಮಟ್ಟಕ್ಕೆ ಕೊಂಡೊಯ್ದರು. ಟಿಮ್ ಡೇವಿಡ್ ಅವರ ಸಾಥ್ ಕೂಡ ತಂಡಕ್ಕೆ ಬಲ ತುಂಬಿತು.

241 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಶಕ್ತಿಮೀರಿ ಪ್ರಯತ್ನಿಸಿತು. ಆದರೆ ಆರ್​ಸಿಬಿ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯದ ನಂತರ ಮಾತನಾಡಿದ ನಾಯಕ ರಜತ್ ಪಾಟಿದಾರ್, “ನಮ್ಮ ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನ ಜವಾಬ್ದಾರಿಯ ಬಗ್ಗೆ ಸ್ಪಷ್ಟ ಅರಿವಿತ್ತು. ಇದೇ ನಮ್ಮ ಗೆಲುವಿಗೆ ಕಾರಣವಾಯಿತು. ವಾಂಖೆಡೆಯ ವೇಗದ ಪಿಚ್‌ನಲ್ಲಿ ವೇಗಿಗಳನ್ನು ಎದುರಿಸುವುದು ನನಗೆ ಇಷ್ಟ,” ಎಂದು ಹೇಳಿದ್ದಾರೆ.

ಈಗಾಗಲೇ ಆಡಿದ 4 ಪಂದ್ಯಗಳಲ್ಲಿ 3 ಗೆಲುವುಗಳನ್ನು ತನ್ನದಾಗಿಸಿಕೊಂಡಿರುವ ಆರ್​ಸಿಬಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಮುನ್ನಡೆ ಸಾಧಿಸಿದೆ. ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಬೆಂಗಳೂರಿನ ನಮ್ಮ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !